ನಾಗಮಂಗಲ: ಯಾವುದೇ ಒಂದು ರಾಜ್ಯ ಕಲ್ಯಾಣ ರಾಜ್ಯವಾಗಲು ಹಾಗೂ ಒಬ್ಬ ವ್ಯಕ್ತಿ ಗೌರವಯುತವಾಗಿ ಸಮಾಜದಲ್ಲಿ ಬದುಕಲು ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಪಾತ್ರ ಅಪಾರವಾದದ್ದು ಎಂದು ಅಪರ ಸಿವಿಲ್ ನ್ಯಾಯಾಧೀಶ ಸಿದ್ದಪ್ಪಾಜಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತಾದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿವಿಧತೆಯಲ್ಲಿ ಏಕತೆಯನ್ನು ಕಾಪಾಡುವುದು ಭಾರತೀಯ ನಾಗರಿಕರಾದ ನಮ್ಮೆಲ್ಲರ ಹೊಣೆಯಾಗಬೇಕು. ದೇಶದಲ್ಲಿ ಇಷ್ಟೆಲ್ಲ ಧರ್ಮಗಳು, ಜಾತಿಗಳಿದ್ದರೂ ಸಾಮರಸ್ಯದಿಂದ ಬದುಕಲು ಸಂವಿಧಾನ ಕಾರಣವಾಗಿದೆ. ನಮ್ಮ ಮನಸ್ಸನ್ನು ನಿಯಂತ್ರಿಸಿಕೊಳ್ಳಲು ಹಾಗೂ ಏಕಾಗ್ರತೆಗಾಗಿ ದೇವರನ್ನು ಆರಾಧಿಸಿ ನಂಬಿಕೆ ಇಡೊಣ. ಆದರೆ ಅದು ಅತಿರೇಕಕ್ಕೆ ಹೋಗಿ ಮೂಢ ನಂಬಿಕೆಯಾಗಬಾರದು. ಸಾಮಾಜಿಕವಾಗಿ ನಮ್ಮ ಜವಾಬ್ದಾರಿಗಳೇನು ಎಂಬುದನ್ನು ಪಠ್ಯದಲ್ಲಿ ಕಲಿತಿರುತ್ತೇವೆ. ಆದರೆ ಅದರ ಜತೆಗೆ ದಿನನಿತ್ಯ ಅನುಭವಕ್ಕೆ ಬರುತ್ತಿರುತ್ತವೆ ಎಂದರು.
ಕಾನೂನಿನಡಿ ಎಲ್ಲರೂ ಸಮಾನರು. ದೀನ- ದಲಿತ, ಬಡವ-ಶ್ರೀಮಂತ ಎಂಬ ಭೇದ ಭಾವವಿರುವುದಿಲ್ಲ. ಅನ್ಯಾಯಕ್ಕೊಳಗಾಗಿರುವವರಿಗೆ ನ್ಯಾಯ ಒದಗಿಸುವುದಷ್ಟೇ ಸಂವಿಧಾನದ ಮುಖ್ಯ ಉದ್ದೇಶವಾಗಿದೆ. ದೇಶದ ನಾಗರಿಕನಿಗೆ ಕಾನೂನುಬದ್ಧವಾಗಿ ಯಾವುದೇ ನಿರ್ಬಂಧವಿಲ್ಲದೆ ಅವನ ಇಷ್ಟದಂತೆ ಬದುಕಲು ಅವಕಾಶ ಕಲ್ಪಿಸಲಾಗಿದೆ. ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮಹಿಳೆಯರು, ಮಕ್ಕಳು ಹಾಗೂ ಶೋಷಿತರ ಅಭಿವೃದ್ದಿಗಾಗಿ ಅವರ ಮೇಲಿನ ಶೋಷಣೆಯನ್ನು ನಿಯಂತ್ರಿಸಲು ಕಾನೂನುಗಳನ್ನು ಜಾರಿಗೆ ತರುವುದು ಸರ್ಕಾರಗಳ ಆದ್ಯ ಕರ್ತವ್ಯವಾಗಿದೆ. ನಮ್ಮ ರಾಷ್ಟ್ರ, ರಾಷ್ಟ್ರಗೀತೆ ಹಾಗೂ ರಾಷ್ಟ್ರ ಧ್ವಜವನ್ನು ಪ್ರತಿಯೊಬ್ಬರೂ ಗೌರವಿಸಬೇಕು. ನಮ್ಮೆಲ್ಲರಿಗೂ ಇಷ್ಟು ಸುಂದರವಾಗಿ ಹಾಗೂ ಸ್ವತಂತ್ರವಾಗಿ ಬದುಕಲು ಅವಕಾಶ ಕಲ್ಪಿಸಿರುವ ಸಂವಿಧಾನವನ್ನು ಗೌರವಿಸಿ ಎಂದರು.
ವಕೀಲರ ಸಂಘದ ಅಧ್ಯಕ್ಷ ಜೆ.ಕೆ.ರಮೇಶ್‌ಗೌಡ, ಪ್ರಾಂಶುಪಾಲ ಎಂ.ಶಿವಪ್ಪ, ಸಹಾಯಕ ಸರ್ಕಾರಿ ಅಭಿಯೋಜಕಿ ಸಿ.ಜೆ.ಶ್ವೇತಾ, ವಕೀಲರ ಸಂಘದ ಕಾರ್ಯದರ್ಶಿ ಮಂಜುನಾಥ್, ವಕೀಲ ಚಿಕ್ಕಸ್ವಾಮಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಧನಂಜಯ, ಉಪನ್ಯಾಸಕರಾದ ಚಂದ್ರಶೇಖರ್, ಜಯರಾಮ್, ಶುಭ ಸೇರಿದಂತೆ ಮತ್ತಿತರರಿದ್ದರು.