ಜಿಲ್ಲೆ

ಸಾಮರಸ್ಯದ ಹಬ್ಬವಾಗಲಿ ಗಣೇಶೋತ್ಸವ  * ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿಕೆ

ದಾವಣಗೆರೆ: ಸರ್ಕಾರದ ಸುತ್ತೋಲೆಯನ್ವಯ ಜಿಲ್ಲೆಯಲ್ಲಿ ಗಣೇಶೋತ್ಸವ ಆಚರಿಸಬೇಕು. ಶಾಂತಿ- ಸೌಹಾರ್ದ ಕಾಪಾಡಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಬುಧವಾರ, ಗೌರಿ ಗಣೇಶ ಚತುರ್ಥಿ ಪ್ರಯುಕ್ತ ಆಯೋಜಿಸಿದ್ದ ನಾಗರಿಕ ಸೌಹಾರ್ದ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಣೇಶೋತ್ಸವ ಸಾರ್ವಜನಿಕ ಆಚರಣೆಯಾಗಿದ್ದು, ಪರಿಸರಸ್ನೇಹಿ ಮಣ್ಣಿನ ಮೂರ್ತಿ ಸ್ಥಾಪಿಸಬೇಕು. ಸಾರ್ವಜನಿಕ ಸುರಕ್ಷತೆಗೆ ಗಮನ ನೀಡಬೇಕು. ಪರಿಸರ ಮಾಲಿನ್ಯವಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು. ಪಾಲಿಕೆ ವತಿಯಿಂದ ಮೂರು ಕಡೆ ಏಕಗವಾಕ್ಷಿಯಡಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿಸಲಾಗುವುದು. ಆಯೋಜಕರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಪರವಾನಗಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಎಸ್ಪಿ ಸಿ.ಬಿ ರಿಷ್ಯಂತ್ ಮಾತನಾಡಿ, ಆಯೋಜಕರು ಕಡ್ಡಾಯವಾಗಿ ಪರವಾನಗಿ ಪಡೆಯಲೇ ಬೇಕು. ಫ್ಲೆಕ್ಸ್ ಬಳಕೆಗೂ ಅನುಮತಿ ಪಡೆಯಬೇಕು.ವಿಸರ್ಜನೆ ಸ್ಥಳದಲ್ಲಿ ಈಜು ಬಾರದವರು ನೀರಿಗೆ ಇಳಿಯಬಾರದು. ಗುರುತಿನ ಚೀಟಿ ಸಹಿತ ಜವಾಬ್ದಾರಿಯುತ ಸ್ವಯಂಸೇವಕರನ್ನು ನೇಮಿಸಿ ಅವರ ಪಟ್ಟಿಯನ್ನು ಪೊಲೀಸ್ ಇಲಾಖೆಗೆ ಸಲ್ಲಿಸಬೇಕು ಎಂದು ತಿಳಿಸಿದರು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ, ನಿಗದಿಪಡಿಸಿದ ಡೆಸಿಬಲ್ ಹೊಂದಿರುವ ಧ್ವನಿವರ್ಧಕಗಳನ್ನು ಬಳಸಲು ಅವಕಾಶವಿದೆ. ಸಮಿತಿಯವರು ಸಹಕರಿಸಬೇಕೆಂದರು. ಜಿ.ಪಂ ಸಿಇಒ ಡಾ.ಎ.ಚನ್ನಪ್ಪ, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಎಎಸ್ಪಿ ರಾಮಗೊಂಡ ಬಸರಗಿ,ಉಪವಿಭಾಗಾಧಿಕಾರಿಗಳಾದ ದುರ್ಗಾಶ್ರೀ, ಹುಲ್ಲುಮನಿ ತಿಮ್ಮಣ್ಣ, ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಮುಖಂಡರಾದ ಕೆ.ಬಿ.ಶಂಕರನಾರಾಯಣ, ವೈ.ಮಲ್ಲೇಶ್, ಅಮಾನುಲ್ಲಾಖಾನ್ ಇತರರಿದ್ದರು. --