ಬಾಗಲಕೋಟ: ಯೋಗವು ನಮ್ಮ ದೇಹ, ಮನಸ್ಸು ಮತ್ತು ಆತ್ಮಬಲ ಹೆಚ್ಚಿಸುವುದು ಮಾತ್ರವಲ್ಲದೆ, ಜಗತ್ತಿನಲ್ಲಿ ಸಾಮರಸ್ಯ ಸಾಧಿಸುವ ವಿಶಿಷ್ಟ ಶಕ್ತಿ ಸಹ ಹೊಂದಿದೆ ಎಂದು ಕೇಂದ್ರ ಆಹಾರ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ವಿಶ್ವ ಪಾರಂಪರಿಕ ತಾಣ ಪಟ್ಟದಕಲ್ಲಿನ ವಿರೂಪಾಕ್ಷ ದೇವಸ್ಥಾನದ ಆವರಣದಲ್ಲಿ ಭಾರತೀಯ ಪುರಾತತ್ವ ಸರ್ವೆಕ್ಷಣ ಇಲಾಖೆ ಹಮ್ಮಿಕೊಂಡ 11ನೇ ಅಂತರರಾಷ್ಟ್ರೀಯ ಯೋಗದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಯೋಗ ನಮ್ಮ ಪ್ರಾಚೀನ ಆಧ್ಯಾತ್ಮಿಕ, ಶಾರೀರಿಕ ಮತ್ತು ಮಾನಸಿಕ ಸದೃಢತೆಗೆ ಉತ್ತಮ ಅಭ್ಯಾಸವಾಗಿದೆ. ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಈ ವರ್ಷದ ಅಂತರಾಷ್ಟ್ರೀಯ ಯೋಗ ದಿನದ ಧ್ಯೇಯ ವಾಕ್ಯವಾಗಿದೆ ಎಂದರು.
ಭಾರತೀಯ ನೆಲದಲ್ಲಿ ಅರಳಿದ ಯೋಗವು ಪ್ರಧಾನಿ ಮಂತ್ರಿಗಳ ಆಶಯದಂತೆ ಜಾಗತಿಕ ಆರೋಗ್ಯ ಮತ್ತು ಶಾಂತಿಯನ್ನು ಉತ್ತೇಜಿಸುವ ಸಾಧನವಾಗಿದೆ. ಪ್ರಸ್ತುತದ ಪ್ರತಿಕೂಲಕ ಪರಿಸ್ಥಿತಿಯಲ್ಲಿ ಯೋಗ ಅನುಸರಣೆ ವಿಶ್ವಕ್ಕೆ ಅತ್ಯಗತ್ಯವಾಗಿದೆ ಎಂಬುದನ್ನು ಪ್ರಧಾನ ಮಂತ್ರಿಗಳು ಪ್ರತಿಪಾದಿಸಿದ್ದಾರೆ. ಅದರ ಪ್ರತಿಫಲವಾಗಿ ಇಂದು ವಿಶ್ವವೇ ಯೋಗಭ್ಯಾಸದಲ್ಲಿ ನಿರತವಾಗಿದೆ. 21ನೇ ಶತಮಾನ ಭಾರತದ ಶತಮಾನ ಆಗುವಲ್ಲಿ ಯೋಗ ಅನನ್ಯ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ್, ವಿಧಾನ ಪರಿಷತ್ ಶಾಸಕ ಹನುಮಂತ ನಿರಾಣಿ, ಜಿಲ್ಲಾಧಿಕಾರಿ ಸಂಗಪ್ಪ ಎಂ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಭಾರತೀಯ ಪುರಾತತ್ವ ಸಮೀಕ್ಷೆಯ ಹಿರಿಯ ಅಧಿಕಾರಿ ನವರತ್ನಿ ಕುಮಾರ್ ಪಾಟಕ್ ಹಾಗೂ ಅಧಿಕಾರಿ ವರ್ಗ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.