ಕೊಪ್ಪ ತಾಲೂಕಿನ ಹರಿಹರಪುರ ಮಠದಲ್ಲಿ ಬ್ರಹ್ಮೋತ್ಸವದಲ್ಲಿ ಕೃಷಿ ಮೇಳವನ್ನು ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು. ಎಸ್.ಎನ್.ರಾಮಸ್ವಾಮಿ, ವಿಕಾಸ್ ಬೇಗಾನೆ ಇತರರಿದ್ದರು. 
ಜಿಲ್ಲೆ

ಸಾಮರಸ್ಯ, ಸಮಾಜದ ಹಿತ ಬ್ರಹ್ಮೋತ್ಸವದ ಸಂಕಲ್ಪ

ಕೊಪ್ಪ: ಸಾಮರಸ್ಯ ಇದ್ದಾಗ ಸಮಾಜ ಹಿತ ಇರುತ್ತದೆ. ಬ್ರಹ್ಮೋತ್ಸವ ಸಂಕಲ್ಪ ಸಾಮರಸ್ಯ ಮತ್ತು ಸಮಾಜದ ಹಿತವಾಗಿದೆ. ಸಮಾಜದಲ್ಲಿ ಸಾಮರಸ್ಯ ವೃದ್ಧಿಯಾಗಬೇಕಾಗದರೆ ಎಲ್ಲರೊಂದಿಗೆ ಸೇರಿ ಜೀವಿಸಬೇಕು ಎಂದು ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಮಂಗಳವಾರ ಹರಿಹರಪುರ ಮಠದಲ್ಲಿ ಆಯೋಜಿಸಿರುವ ಬ್ರಹ್ಮೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ವೈವಿಧ್ಯವನ್ನು ಒಪ್ಪಿಕೊಳ್ಳುವ ವಿಶಾಲ ದೃಷ್ಟಿಕೋನ ಇರುವಲ್ಲಿ ಸಾಮರಸ್ಯ ಇರುತ್ತದೆ. ಭಾರತೀಯ ಸಂಸ್ಕೃತಿ ವಿಶ್ವ ಸಾಮರಸ್ಯಕ್ಕೆ, ವಿಶ್ವ ಶಾಂತಿಗೆ ಮೂಲಾಧಾರವಾಗಿದೆ. ಭಾರತೀಯ ಸಂಸ್ಕೃತಿ ಮಾತ್ರ ವೈವಿಧ್ಯ ಒಪ್ಪಿಕೊಂಡಿದೆ ಎಂದರು.

ಒಬ್ಬ ಅವತಾರ ಪುರುಷ, ಆಚಾರ್ಯ, ಗುರುವಿಂದ, ಒಬ್ಬ ಮಹಾತ್ಮನಿಂದ ಭಾರತೀಯ ಸಂಸ್ಕೃತಿ ಕಾಪಾಡಲು ಸಾಧ್ಯವಿಲ್ಲ. ಸಂತರು ಒಂದಾದರೆ ಮಾತ್ರ ಸಮಾಜ ಒಂದಾಗುತ್ತದೆ. ಭಾರತೀಯ ಸಂಸ್ಕೃತಿಯ ಮಹೋನ್ನತಿಗಾಗಿ ಬ್ರಹ್ಮೋತ್ಸವದ ಸಂಕಲ್ಪವಾಗಿದೆ ಎಂದು ಹೇಳಿದರು.

ಮಲೆನಾಡಿನ ಕೃಷಿಕರು ತೊಂದರೆ ಎದುರಿಸುತ್ತಿದ್ದಾರೆ. ಕೃಷಿ ಸ್ವಾವಲಂಭಿ ವೃತ್ತಿ. ಕೃಷಿಯನ್ನು ಕೀಳಾಗಿ ಕಾಣಬಾರದು. ನಾನೊಬ್ಬ ಕೃಷಿಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಕೃಷಿ ಜಗತ್ತಿಗೆ ಅನ್ನ ನೀಡುವ ಕೆಲಸ. ಕೃಷಿಕರು ಏಳಿಗೆಯಾದರೆ ದೇಶದ ಉದ್ಧಾರ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಆನೆಗುಂದಿ ಮಹಾ ಸಂಸ್ಥಾನ ಪೀಠದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ವನಕಲ್ಲು ಮಲ್ಲೇಶ್ವರ ಮಹಾ ಸಂಸ್ಥಾನ ಮಠದ ಬಸವರಾಮಾನಂದ ಸ್ವಾಮೀಜಿ, ವೇದಾಂತ ವಿದ್ವಾಂಸ ಪ್ರೊ. ಶಿವರಾಮ್ ಅಗ್ನಿಹೋತ್ರಿ, ವಾಸ್ತುತಜ್ಞ ರಮಾನಂದ ಗುರೂಜಿ, ಮಠದ ಆಡಳಿತಾಧಿಕಾರಿ ಚಂದ್ರನ್, ಹಿಂದು ಜನಜಾಗೃತಿ ವೇದಿಕೆ ಅಧ್ಯಕ್ಷ ಮೋಹನ್ ಗೌಡ, ಸಹಸ್ರನಾಮ ವಾಚಕ ಅರಳುಮಲ್ಲಿಗೆ ಪಾರ್ಥಸಾರಥಿ, ತಾಲೂಕು ವಿಶ್ವಕರ್ಮ ಸಂಘದ ನವೀನ್, ಬ್ರಾಹ್ಮಣ ಸಂಘದ ಅಧ್ಯಕ್ಷ ಕೃಷ್ಣ್ಣಮೂರ್ತಿ ಕೆಸಕೊಡಿಗೆ, ಬ್ರಹ್ಮೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಎನ್.ರಾಮಸ್ವಾಮಿ ಇತರರಿದ್ದರು.