ಜಿಲ್ಲೆ

ಸಾಮರಸ್ಯ ಬೆಳೆಸಲು ಜಾತ್ರೆ ಸಹಕಾರಿ

ಬಸವಕಲ್ಯಾಣ: ಜಾತ್ರೆಗಳು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ಭಕ್ತಿ ಭಾವನೆಯಿಂದ ಜನ ಸೇರಿದಾಗ ಸಾಮರಸ್ಯ ಬೆಳೆಯುತ್ತದೆ ಎಂದು ಬೈಲೂರಿನ ಶ್ರೀ ನಿಜಗುಣಾನಂದ ಮಹಾಸ್ವಾಮೀಜಿ ಹೇಳಿದರು.

ಕೋಹಿನೂರನ ಗುರು ಬಸವೇಶ್ವರ ಲಿಂಗಾಯತ ಮಹಾ ಮಠದಿಂದ ಭಾನುವಾರ ಆಯೋಜಿಸಿದ್ದ ಶ್ರೀ ಮಹಾತ್ಮ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಬಸವ ಭಾರತದ ಬೆಳಕು ಚಿಂತನ ಗೋಷ್ಠಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಪೂಜ್ಯರು, ಜಾತ್ರೆಗಳು ಗ್ರಾಮದಲ್ಲಿ ಭಾವೈಕ್ಯ ಗಟ್ಟಿಗೊಳಿಸಲು ಸಹಕಾರಿಯಾಗುತ್ತವೆ ಎಂದರು.

ಉದ್ಘಾಟನೆ ನೆರವೇರಿಸಿದ ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದೇವರು ಮಾತನಾಡಿ, ಬಸವಣ್ಣನವರು ಮಂತ್ರ ಪರುಷ ವ್ಯಕ್ತಿತ್ವ ಹೊಂದಿದ್ದರು. ಭಕ್ತಿ, ಶ್ರದ್ಧೆ ಇಟ್ಟುಕೊಂಡವರಿಗೆ ಅವರ ಕೃಪಾಶೀರ್ವಾದ ಸದಾ ಇರಲಿದೆ. ವಚನ ಸಾಹಿತ್ಯವನ್ನು ಓದಬೇಕು. ಲಿಂಗನಿಷ್ಠೆ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮ್ಮುಖ ವಹಿಸಿದ್ದ ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಬಸವಣ್ಣನವರ ಸಾಮಾಜಿಕ ಹಾಗೂ ಮಾನವೀಯತೆಯ ಗುಣಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ನೈತಿಕತೆಯ ಆಧಾರದಲ್ಲಿ ಬದುಕು ಕಟ್ಟಿಕೊಳ್ಳಬೇಕಿದೆ ಎಂದರು.

ಆಳಂದ ಅನುಭವ ಮಂಟಪದ ಶ್ರೀ ಕೋರಣೇಶ್ವರ ಮಹಾಸ್ವಾಮೀಜಿ ಮಾತನಾಡಿ, ಗೋಣಿರುದ್ರೇಶ್ವರ ಸ್ವಾಮೀಜಿ ಬಸವ ತತ್ವ ನಿಷ್ಠರಾಗಿದ್ದಾರೆ. ಬಸವ ತತ್ವ ಪ್ರಚಾರ-ಪ್ರಸಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ನೇತೃತ್ವ ವಹಿಸಿದ್ದ ಕೋಹಿನೂರು ಗುರುಬಸವೇಶ್ವರ ಲಿಂಗಾಯತ ಮಹಾಮಠದ ಶ್ರೀ ಗೋಣಿರುದ್ರೇಶ್ವರ ಮಹಾಸ್ವಾಮೀಜಿ, ಸಮ್ಮುಖ ವಹಿಸಿದ್ದ ಕಲಬುರಗಿಯ ಪೂಜ್ಯ ಪ್ರಭುಶ್ರೀ ಮಾತಾಜಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಶ್ರೀಶೈಲ ಮಮದಾಪುರೆ, ಗ್ರಾಪಂ ಸದಸ್ಯೆ ಅನುರಾಧಾ ಜಮಾದಾರ ಇತರರಿದ್ದರು. ರತಿಕಾಂತ ಕೋಹಿನೂರ ಸ್ವಾಗತಿಸಿದರು. ಶಿವಶರಣಪ್ಪ ಸಂತಾಜಿ ನಿರೂಪಣೆ ಮಾಡಿದರು.

ವಚನ ರಥೋತ್ಸವ: ಕೋಹಿನೂರಿನ ಗುರು ಬಸವೇಶ್ವರ ಲಿಂಗಾಯತ ಮಹಾ ಮಠದಿಂದ ಆಯೋಜಿಸಿದ್ದ ಶ್ರೀ ಮಹಾತ್ಮ ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಭಾನುವಾರ ಸಂಜೆ ಬಸವಾದಿ ಶರಣರ ವಚನ ರಥೋತ್ಸವ ಜೈಘೋಷಗಳ ಮಧ್ಯೆ ಜರುಗಿತು. ಶ್ರೀ ನಿಜಗುಣಾನಂದ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಮಹಿಳೆಯರೇ ರಥ ಎಳೆದದ್ದು ವಿಶೇಷವಾಗಿತ್ತು. ಪ್ರಮುಖರಾದ ನರಸಪ್ಪ ಜಮದಾರ, ಕಲ್ಯಾನರಾವ ವಿಸಾಜಿ, ದಿಲೀಪ ಜಮದಾರ, ವೈಜಿನಾಥ ಪೂಜಾರಿ, ಕಾಶಿರಾಯ ಹಿರೇಮಠ, ದಿಲೀಪ ಪೂಜಾರಿ, ಅಂಬಾದಾಸ ಸಜ್ಜನ, ಆಕಾಶ ಪಾಟೀಲ್, ಶ್ರೀಶೈಲ ಪರಾಂಡೆ ಹಾಗೂ ಪ್ರಮುಖರು ಭಾಗವಹಿಸಿದ್ದರು.