ಜಿಲ್ಲೆ

ಸಾಮಗ್ರಿ ಖರೀದಿಗೆ ವೇಳಾಪಟ್ಟಿ ಬಿಡುಗಡೆ

ಹಾಸನ: ಲಾಕ್‌ಡೌನ್‌ನ ಕಟ್ಟುನಿಟ್ಟಿನ ಜಾರಿಗೆ ಹೊಸ ನಿಯಮ ರೂಪಿಸಿರುವ ಜಿಲ್ಲಾಡಳಿತ ಜೀವನಾವಶ್ಯಕ ಸಾಮಗ್ರಿ ಖರೀದಿಗೆ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಮಾರಕ ಕರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ತುರ್ತು ಅಗತ್ಯವಾಗಿರುವುದರಿಂದ ಜನದಟ್ಟಣೆ ನಿಯಂತ್ರಣಕ್ಕೆ ಮುಂದಾಗಿದೆ. ಭಾನುವಾರ, ಮಂಗಳವಾರ, ಗುರುವಾರ ಹಾಗೂ ಶನಿವಾರದಂದು ಬೆಳಗ್ಗೆ 7 ರಿಂದ ಮಧ್ಯಾಹ್ನ 12ರವರೆಗೆ ದಿನಸಿ ಅಂಗಡಿ, ಮಾಲ್, ತರಕಾರಿ, ಪೇಪರ್, ಹಾಲು, ಪೆಟ್ರೋಲ್ ಬಂಕ್ ತೆರೆಯಲು ನಿರ್ಧರಿಸಲಾಗಿದೆ. ಸೋಮವಾರ, ಬುಧವಾರ, ಶುಕ್ರವಾರದಂದು ಬೆಳಗ್ಗೆ 6 ರಿಂದ 8ರ ವರೆಗೆ ಹಾಲು ಮತ್ತು ಪೇಪರ್ ಖರೀದಿಗೆ ಅವಕಾಶ ನೀಡಲಾಗಿದೆ. ಔಷಧ ಅಂಗಡಿ ಮತ್ತು ಆಸ್ಪತ್ರೆಗಳು ಯಾವಾಗಲೂ ತೆರೆದಿರುತ್ತದೆ.
ನೀತಿ ಪಾಠ ಹೇಳಿದ ಎಸ್ಪಿ: ಕರೊನಾ ವಿರುದ್ಧದ ಹೋರಾಟದ ಭಾಗವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ಭಾನುವಾರ ಬೆಳಗ್ಗೆ 6 ಗಂಟೆಗೆ ವಾಯು ವಿಹಾರಕ್ಕೆಂದು ಮನೆಯಿಂದ ಹೊರ ಬಂದವರಿಗೆ ನೀತಿ ಪಾಠ ಮಾಡಿದರು.

ಜಿಲ್ಲಾ ಕ್ರೀಡಾಂಗಣ ಬಂದ್ ಆಗಿರುವುದರಿಂದ ಬೆಳಗಿನ ಸಂಚಾರಕ್ಕೆ ಜನರು ಬಿಎಂ ರಸ್ತೆ ಅವಲಂಬಿಸಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಬೆಳಗ್ಗೆ 6 ಗಂಟೆಗೆ ಬರುತ್ತಿದ್ದಂತೆ ಜನರೆಲ್ಲ ಅಲ್ಲಿಂದ ಚದುರಲು ಪ್ರಾರಂಭಿಸಿದರು. ಮೈಕ್ ಮೂಲಕ ಎಲ್ಲರ ಗಮನವನ್ನು ತಮ್ಮೆಡೆಗೆ ಸೆಳೆದ ಆರ್. ಶ್ರೀನಿವಾಸ್‌ಗೌಡ ಎಲ್ಲರಿಗೂ ಅಲ್ಲೇ ನಿಲ್ಲುವಂತೆ ಸೂಚಿಸಿದರು. ಮಾರಕ ಕರೊನಾದಿಂದ ಆಗುತ್ತಿರುವ ದುಷ್ಪರಿಣಾಮದ ಅರಿವಿದ್ದರೂ ತಪ್ಪು ಮಾಡುತ್ತೀದ್ದೀರಿ. ಮನೆಯಲ್ಲೇ ವ್ಯಾಯಾಮ ಮಾಡಲು ಬರುವುದಿಲ್ಲವೇ ?. ದಿನದ 24 ಗಂಟೆ ಕಷ್ಟಪಟ್ಟು ಕೆಲಸ ಮಾಡುತ್ತಿರುವುದು ಯಾರಿಗಾಗಿ ಎಂದು ಪ್ರಶ್ನಿಸಿದರು.

ನಂತರ ಪೊಲೀಸ್ ವ್ಯಾನ್‌ಗಳಲ್ಲಿ ಅಲ್ಲಿದ್ದ 30ಕ್ಕೂ ಹೆಚ್ಚು ಜನರನ್ನು ಕೂರಿಸಿಕೊಂಡು ಡಿಎಆರ್ ಪೊಲೀಸ್ ಮೈದಾನಕ್ಕೆ ಕರೆದೊಯ್ಯಲಾಯಿತು. ಸೂರ್ಯ ನಮಸ್ಕಾರ ಸೇರಿದಂತೆ ಮನೆಯಲ್ಲೇ ಮಾಡಬಹುದಾದ ಯೋಗ ವಿಧಾನಗಳನ್ನು ಎಸ್ಪಿ ಹೇಳಿಕೊಟ್ಟರು. ನಂತರ ಎಲ್ಲರನ್ನೂ ಕಳುಹಿಸಿಕೊಡಲಾಯಿತು.

ಶಾಸಕರ ಅಭಿಮಾನಿಗಳಿಂದ ನಿರ್ಗತಿಕರಿಗೆ ನೆರವು: ಲಾಕ್ ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರು, ನಿರ್ಗತಿಕರ ಸಹಾಯಕ್ಕೆ ಧಾವಿಸಿರುವ ಶಾಸಕ ಪ್ರೀತಂ ಜೆ.ಗೌಡ ಬೆಂಬಲಿಗರು ನಗರ ವ್ಯಾಪ್ತಿಯಲ್ಲಿ ಉಚಿತವಾಗಿ ಆಹಾರ ಧಾನ್ಯ ವಿತರಿಸಲು ವ್ಯವಸ್ಥೆ ರೂಪಿಸಿದ್ದಾರೆ.
ದಿನದ ಕೂಲಿಯನ್ನೇ ನಂಬಿಕೊಂಡಿರುವ ಕೂಲಿ ಕಾರ್ಮಿಕರು, ಆದಾಯವಿಲ್ಲದಂತಾಗಿರುವ ಬಡವರಿಗೆ ದಿನ ಬಳಕೆ ವಸ್ತುಗಳನ್ನು ಕೊಳ್ಳುವುದು ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಅಭಿಮಾನಿ ಬಳಗ ಹಾಗೂ ಬಿಜೆಪಿ ನಗರ ಮಂಡಲದ ವತಿಯಿಂದ ಕೂಲಿ ಕಾರ್ಮಿಕರಿಗೆ ಬಡವರಿಗೆ ಉಚಿತ ದಿನಸಿ ಪದಾರ್ಥಗಳನ್ನು ವಿತರಿಸಲಾಗುತ್ತಿದೆ.

ತಲಾ 5 ಕೆ.ಜಿ. ಅಕ್ಕಿ, ಗೋಧಿ, ಅರ್ಧ ಲೀಟರ್ ಪಾಮ್ ಆಯಿಲ್, ಅರ್ಧ ಕೆ.ಜಿ. ತೊಗರಿ ಬೇಳೆ, ಉಪ್ಪು ಮುಂತಾದ ಆಹಾರ ತಯಾರಿಕೆಗೆ ಅಗತ್ಯವಾದ ವಸ್ತುಗಳನ್ನು ಪ್ಯಾಕ್ ಮಾಡಲಾಗಿದೆ. ವಸ್ತುಗಳ ಅಗತ್ಯವಿರುವ ಬಡವರು ಬಿಜೆಪಿ ನಗರ ಮಂಡಲದ ಅಧ್ಯಕ್ಷ ಎಸ್.ಕೆ. ವೇಣುಗೋಪಾಲ್ ಅವರ ಮೊಬೈಲ್ ಸಂಖ್ಯೆ 9731598989ಗೆ ಕರೆ ಮಾಡಿದರೆ ಪ್ಯಾಕೆಟ್ ತಲುಪಿಸುತ್ತಾರೆ.

ಮಾಸ್ಕ್, ಸ್ಯಾನಿಟೈಸರ್ ವಿತರಣೆ: ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪದಾಧಿಕಾರಿಗಳು ಸಾರ್ವಜನಿಕರಿಗೆ ಉಚಿತ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿದರು. ಸರ್ಕಾರಿ ಆಸ್ಪತ್ರೆ ಹಾಗೂ ಇಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣ ಕಾರ್ಮಿಕರು, ನಿರ್ಗತಿಕರು, ಬಡವರಿಗೆ ಸಾಮಗ್ರಿ ನೀಡಲಾಯಿತು.