ಜಿಲ್ಲೆ

ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ (ಎಸ್‌ಟಿಪಿಐ) ಕಾಮಗಾರಿ ವೀಕ್ಷಿಸಿದ ಸಂಸದ ಪ್ರತಾಪಸಿಂಹ

ಮೈಸೂರು: ಹೆಬ್ಬಾಳು ಕೈಗಾರಿಕಾ ಪ್ರದೇಶದ ಇನ್ಫೋಸಿಸ್ ಬಳಿ 27 ಕೋಟಿ ರೂ. ವೆಚ್ಚದಲ್ಲಿ ನಡೆದಿರುವ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ (ಎಸ್‌ಟಿಪಿಐ) ಕಾಮಗಾರಿಯನ್ನು ಸಂಸದ ಪ್ರತಾಪಸಿಂಹ ಶುಕ್ರವಾರ ವೀಕ್ಷಿಸಿದರು.
ಸುಮಾರು 1.36 ಎಕರೆ ಪ್ರದೇಶದಲ್ಲಿ ಟೆಕ್ನಾಲಜಿ ಪಾರ್ಕ್‌ನಲ್ಲಿ ನೆಲಮಾಳಿಗೆಯೊಂದಿಗೆ 2 ಮಹಡಿಯನ್ನು ಒಳಗೊಂಡಿರುವ ಕಟ್ಟಡ ನಿರ್ಮಾಣಗೊಳ್ಳುತ್ತಿವೆ. ಉಳಿದಿರುವ ಕಾಮಗಾರಿಗಳನ್ನು ಶೀಘ್ರ ಮುಗಿಸಿದರೆ ದಸರಾ ಒಳಗೆ ಉದ್ಘಾಟನೆ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಕೂಡಲೇ ಕೆಲಸ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈಗಾಗಲೇ ದಾವಣಗೆರೆಯಲ್ಲಿ ಟೆಕ್ನಾಲಜಿ ಪಾರ್ಕ್ ಉದ್ಘಾಟನೆಗೊಂಡಿದೆ. ನಮ್ಮಲ್ಲಿ ಸ್ವಲ್ಪ ವಿಳಂಬವಾಗಿದೆ. ನಾವು ದಸರಾ ಒಳಗೆ ಉದ್ಘಾಟನೆ ಮಾಡಬೇಕು ಎಂದುಕೊಂಡಿದ್ದೇವೆ. ಮಾಹಿತಿ ಮತ್ತು ತಂತ್ರಜ್ಞಾನ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಉದ್ಘಾಟನೆಗೆ ಬರಲು ಒಪ್ಪಿದ್ದಾರೆ. ಎಲ್ಲ ಕಾಮಗಾರಿಗಳು ಮುಗಿದಿದು, ಪೀಠೋಪಕರಣಗಳ ಜೋಡಣೆ ಹಾಗೂ ಸ್ವಚ್ಛತೆ ಮಾತ್ರ ಉಳಿದಿದೆ ಎಂದು ಹೇಳಿದರು.
ಮೈಸೂರು-ಹುಣಸೂರು ಮುಖ್ಯ ರಸ್ತೆಯ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಹಿನಕಲ್‌ನಿಂದ ಸಂತ ಜೋಸೆಫ್ ಶಾಲೆವರೆಗೆ ರಸ್ತೆ (ಬೆಳವಾಡಿ ವೃತ್ತದ ಬಳಿ) ವಿಸ್ತರಣೆ ಕಾಮಗಾರಿಯನ್ನು ಇದೇ ಸಂದರ್ಭದಲ್ಲಿ ಸಂಸದ ಪತ್ರಾಪ್ ಸಿಂಹ ವಿಕ್ಷಿಸಿದರು.
ಎಇಇ ಸದಾಶಿವಮೂರ್ತಿ, ಎಇ ರಾಘವೇಂದ್ರ, ಇಂಜಿನಿಯರ್ ಹೇಮಂತ್‌ಕುಮಾರ್ ಸೇರಿದಂತೆ ಇತರರು ಇದ್ದರು.