ಜಿಲ್ಲೆ

ಸಾಧ್ಯವಾದಷ್ಟು ಶೀಘ್ರ ಕಡತ ವಿಲೇವಾರಿ ಮಾಡಿ

ಸೋಮವಾರಪೇಟೆ: ಸರ್ಕಾರಿ ಇಲಾಖೆಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಸಾಧ್ಯವಾದಷ್ಟು ಶೀಘ್ರ ಕಡತ ವಿಲೇವಾರಿ ಮಾಡಬೇಕೆಂದು ಜೆಎಂ ಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶ ಗೋಕುಲ್ ಸಲಹೆ ನೀಡಿದರು.


ತಾಲೂಕು ಕಾನೂನು ಸೇವಾ ಸಮಿತಿ ಮತ್ತು ತಾಲೂಕು ಆಡಳಿತದ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನಸಾಮಾನ್ಯರು ಉತ್ತಮವಾಗಿ ಜೀವಿಸಲು ಅನುಕೂಲವಾಗುವಂತೆ ಸಂವಿಧಾನವಿದ್ದು, ಜನರ ಮೂಲ ಹಕ್ಕುಗಳಿಗೆ ಚ್ಯುತಿಬಾರದಂತೆ ಕರ್ತವ್ಯ ನಿರ್ವಹಿಸುವ ಜವಾಬ್ದಾರಿ ಸರ್ಕಾರದ ನೌಕರರ ಮೇಲಿದೆ ಎಂದರು. ಇಂದು ಜನಸಾಮಾನ್ಯರು ಕಂದಾಯ ಹಾಗೂ ಸರ್ವೆ ಇಲಾಖೆಗೆ ದಿನನಿತ್ಯ ಅಲೆಯುತ್ತಿದ್ದಾರೆ, ಅವರ ಶೋಷಣೆ ಸಲ್ಲದು. ಈ ಬಗ್ಗೆ ನ್ಯಾಯಾಲಯದ ಗಮನಕ್ಕೆ ಬಂದಿದೆ. ಸರ್ವೇ, ಪೋಡಿ, ದುರಸ್ತುಗೆ ಸಂಬಂಧಿಸಿದಂತೆ ಸಮಸ್ಯೆಗಳಾಗಿವೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದರು.


ಕೆಲವು ವಿದ್ಯಾರ್ಥಿಗಳು ಹಾಗೂ ಯುವಕರು ಮಾದಕ ವಸ್ತುಗಳ ವ್ಯಸನಿಗಳಾಗಿ ಹಾದಿ ತಪ್ಪುತ್ತಿದ್ದಾರೆ. ಅವರ ಮೇಲೆ ಪೊಲೀಸ್ ಇಲಾಖೆ ನಿಗಾ ಇಡಬೇಕು. ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಿವಿಲ್ ನ್ಯಾಯಾಧೀಶ ಗೋಪಾಲಕೃಷ್ಣ ತಿಳಿಸಿದರು.


ಮಕ್ಕಳು ಹಾಗೂ ಸೂಕ್ತ ದಾಖಲೆ ಇಲ್ಲದೆ ವಾಹನ ಚಾಲನೆ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ಈ ಬಗ್ಗೆ ಮಕ್ಕಳ ಪಾಲಕರೂ ಗಮನಹರಿ ಸಬೇಕು ಎಂದರು. ತಹಸೀಲ್ದಾರ್ ಎಸ್.ಎನ್.ನರಗುಂದ, ಪೊಲೀಸ್ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಇದ್ದರು.