ಮೈಸೂರು: ಭಾರತೀಯ ಸಂಸ್ಕೃತಿಯನ್ನು ಸಾಧು-ಸಂತರು, ಋಷಿ-ಮುನಿಗಳು ಅನಾದಿ ಕಾಲದಿಂದಲೇ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಇದುವೇ ವಿಶ್ವಬಂಧುತ್ವ, ವಿಶ್ವಶಾಂತಿ, ಸಮತಾ-ಸಮಾನತೆಗೆ ಪ್ರೇರಣೆ ನೀಡಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.
ನಗರದ ಸುತ್ತೂರು ಮಠದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 107ನೇ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯ ಏಕತೆ- ಅಖಂಡತೆ ಮತ್ತು ಸನಾತನ ಧರ್ಮದ ಪರಂಪರೆಯನ್ನು ಶ್ರೀಮಂತಗೊಳಿಸುವಲ್ಲಿ ಸಾಧು- ಸಂತರು ಅಭೂತಪೂರ್ವ ಕೊಡುಗೆ ನೀಡಿದ್ದಾರೆ. ಹೀಗಾಗಿ, ಅನೇಕ ದೇಶಗಳು ಆಧಾತ್ಮಿಕ ಮತ್ತು ಮಾನಸಿಕ ಕಲ್ಯಾಣಕ್ಕಾಗಿ ಭಾರತದತ್ತ ನೋಡುತ್ತಿವೆ. ಸಾಧುಸಂತರೆಲ್ಲರೂ ಸೇರಿಕೊಂಡು ವಿಶ್ವ ಕಲ್ಯಾಣಕ್ಕೆ ಚಾಲನೆ ನೀಡಿ ‘ವಸುದೈವ ಕುಟುಂಬಕಂ’ ಪರಿಕಲ್ಪನೆಯನ್ನು ಪೂರ್ಣಗೊಳಿಸಬೇಕೆಂಬ ಅಪೇಕ್ಷೆ ಜಾಗತಿಕವಾಗಿ ವ್ಯಕ್ತವಾಗುತ್ತಿದೆ ಎಂದರು.
ಸಾಧು-ಸಂತರು ಮತ್ತು ಗುರುಗಳ ಜನ್ಮದಿನದ ಆಚರಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಇದುವೇ ಈ ಮಹಾನ್ ರಾಷ್ಟ್ರದ ಸಂಸ್ಕೃತಿ ಮತ್ತು ನೀತಿಯ ಅವಿಭಾಜ್ಯ ಅಂಗವಾಗಿದೆ ಎಂದು ಅಭಿಪ್ರಾಯಪಟ್ಟರು.
ಚಿಂತನಾಶೀಲ, ಸಂವೇದನಾಶೀಲ ಸ್ವಾಮೀಜಿ:
ಸದಾಚಾರ, ಧರ್ಮನಿಷ್ಠೆ ಮತ್ತು ಸಕಾರಾತ್ಮಕ ಶಕ್ತಿ ಹೊಂದಿರುವ ಸುತ್ತೂರು ಮಠ ನಾಡಿನ ಪ್ರಸಿದ್ಧ ಮಠಗಳಲ್ಲಿ ಒಂದು. ಇದು ಸಾಮಾಜಿಕ ಪ್ರಗತಿಯಲ್ಲಿ ಮಹತ್ವದ ಕೊಡುಗೆ ನೀಡಿದೆ. ರಾಜೇಂದ್ರ ಶ್ರೀಗಳು ಚಿಂತನಾಶೀಲ ಮತ್ತು ಸಂವೇದನಾಶೀಲರು. ಇವರೊಬ್ಬ ಧರ್ಮ, ಸಂಸ್ಕೃತ ಮತ್ತು ಆಧ್ಯಾತ್ಮಿಕತೆಯ ಸಂರಕ್ಷಕರು. ಸಮಾಜದಲ್ಲಿನ ಅಸಮಾನತೆ, ಬಡತನ ಮತ್ತು ಅನಕ್ಷರತೆಯ ಸಮಸ್ಯೆ ನಿವಾರಣೆಗಾಗಿ ಅನೇಕ ಸಕಾರಾತ್ಮಕ ಕ್ರಮ ತೆಗೆದುಕೊಂಡಿದ್ದರು ಎಂದು ರಾಜ್ಯಪಾಲರು ಸ್ಮರಿಸಿದರು.
ಸಾಮಾಜಿಕ-ಆರ್ಥಿಕ ಪರಿವರ್ತನೆಯೊಂದಿಗೆ ಸಮಾಜವನ್ನು ಆತ್ಮನಿರ್ಭರ (ಸ್ವಾವಲಂಬಿನೆ) ಮಾಡಲು ಸುತ್ತೂರು ಮಠ ಮುಂದಾಗಿದೆ. ಅದಕ್ಕಾಗಿ ಸಾಮಾಜಿಕ ಸಮಾನತೆ, ಸಮೃದ್ಧಿ, ಶ್ರೇಷ್ಠತೆ, ಸಬಲೀಕರಣ, ಉದ್ಯಮಶೀಲತೆ ಮತ್ತು ಜ್ಞಾನೋದಯಕ್ಕಾಗಿ ಎಲ್ಲರಿಗೂ ಮೌಲಿಕ ಶಿಕ್ಷಣ ನೀಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಬಣ್ಣಿಸಿದರು.
ಶ್ರೀಮಠ ಅಕ್ಷರ ದಾಸೋಹಕ್ಕಾಗಿ ಶಾಲಾ-ಕಾಲೇಜು, ಅನ್ನದಾಸೋಹಕ್ಕಾಗಿ ಹಾಸ್ಟೆಲ್, ವಸತಿ ಶಿಕ್ಷಣ ಸಂಸ್ಥೆಗಳು ಮತ್ತು ಆರೋಗ್ಯ ದಾಸೋಹಕ್ಕಾಗಿ ಆಸ್ಪತ್ರೆ ಸ್ಥಾಪಿಸಿದೆ. ನವಕಾಲಕ್ಕೆ ತಕ್ಕಂತೆ ಆಧುನಿಕ ಶಿಕ್ಷಣ ನೀಡುವಂತಹ ಶ್ರೇಷ್ಠ ಕೆಲಸವನ್ನೂ ಮಾಡುತ್ತಿದೆ. ಮೌಲ್ಯಾಧಾರಿತ ಶೈಕ್ಷಣಿಕ ವ್ಯವಸ್ಥೆ ಜಾರಿಯಲ್ಲಿ ಮಠ ಮುಂಚೂಣಿಯಲ್ಲಿದೆ ಎಂದರು.
ಮಠದ ಈಗಿನ ಶ್ರೀಗಳಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಮ್ಮ ಗುರುಪರಂಪರೆ, ಮಠದ ಶ್ರೇಷ್ಠ ಪರಂಪರೆ ಮತ್ತು ಪ್ರಯತ್ನಗಳ ದರ್ಶನ ಮತ್ತು ಸದ್ಭಾವನೆಯನ್ನು ಇನ್ನಷ್ಟು ವಿಸ್ತರಿಸುತ್ತಿದ್ದಾರೆ. ಇದರೊಂದಿಗೆ, ಶ್ರೀಮಠದ ಸೇವಾ ಮನೋಭಾವ ಮತ್ತು ಕೀರ್ತಿಯನ್ನು ಜಾಗತಿಕ ಆಯಾಮಗಳಿಗೆ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು.
ಹೊಸ ಇತಿಹಾಸ ಬರೆದ ಶ್ರೀಗಳು:
ಸುತ್ತೂರು ಮಠ ಮತ್ತು ಸಿದ್ಧಗಂಗಾ ಮಠಗಳೆರಡು ಬೇರೆ ಬೇರೆಯಲ್ಲ. ಇವುಗಳು ಸಮಾಜದ ಎರಡು ಕಣ್ಣುಗಳು ಎಂದು ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ತಮಗಾಗಿ ಬದುಕುವುದು ತೀರಾ ವೈಯಕ್ತಿಕ. ಆದರೆ, ಬೇರೆಯವರಿಗಾಗಿ ಬದುಕುವುದು ಸಾರ್ಥಕ. ಇದುವೇ ಶಾಶ್ವತವಾಗಿ ಜನರ ಮನದಲ್ಲಿ ಉಳಿಯುತ್ತದೆ. ಈ ರೀತಿ ಬದುಕು ಬಾಳಿದ ರಾಜೇಂದ್ರ ಶ್ರೀಗಳು ತಮ್ಮ ಇಡೀ ಜೀವನವನ್ನು ನಾಡಿಗಾಗಿ ಅರ್ಪಣೆ ಮಾಡಿದ್ದರು. ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸುತ್ತೂರು ಮಠ ಹಿಮಾಲಯದ ಎತ್ತರಕ್ಕೆ ಬೆಳೆಯಲು ಭದ್ರ ತಳಪಾಯ ಹಾಕಿದ್ದರು. ಅವರೊಬ್ಬ ತ್ಯಾಗಮಯಿ, ಮಾತೃಹೃದಯಿ ಆಗಿದ್ದರು. ಶೈಕ್ಷಣಿಕ ಕ್ಷೇತ್ರಕ್ಕೆ ಅಭೂತಪೂರ್ವ ಕೊಡುಗೆ ನೀಡಿದರು ಎಂದು ಸ್ಮರಿಸಿದರು.
ಸುತ್ತೂರು ಪರಂಪರೆಯ ಸಾವಿರಾರು ವರ್ಷಗಳ ಇತಿಹಾಸದಲ್ಲಿ ರಾಜೇಂದ್ರ ಶ್ರೀಗಳು ಹೊಸ ಇತಿಹಾಸ ಬರೆದರು. ಶಾಂತಿ, ನೆಮ್ಮದಿ, ಸೌಹಾರ್ದತೆ ಮತ್ತು ಸ್ನೇಹಪರತೆ ಮೂಲತತ್ವವನ್ನು ಅಳವಡಿಸಿಕೊಂಡು ಬದುಕಿದ ಶ್ರೀಗಳದ್ದು ವೈಶಿಷ್ಯಪೂರ್ಣ ಸೇವಾ ಕಾರ್ಯ ಎಂದು ತಿಳಿಸಿದರು.
ಧರ್ಮ ಸಡಿಲವಾದರೆ ಸ್ವಪ್ರತಿಷ್ಠೆ, ಸ್ವಾರ್ಥ ಸೃಷ್ಟಿ:
ಧರ್ಮ ಆಧಾರಿತವಾದ ಯಾವುದೇ ಕಾರ್ಯದಲ್ಲೂ ಶಾಂತಿ-ನೆಮ್ಮದಿ ನೆಲೆಸುತ್ತದೆ. ಧರ್ಮದ ಪಾತ್ರ ಸಡಿಲವಾದರೆ ಅಲ್ಲಿ ಸ್ವಪ್ರತಿಷ್ಠೆ, ಸ್ವಾರ್ಥ ಸೃಷ್ಟಿಯಾಗಿ ವ್ಯಕ್ತಿ-ವ್ಯಕ್ತಿಗಳ ನಡುವೆ ಸಂಘರ್ಷ ಉಂಟಾಗುತ್ತದೆ. ಇದಕ್ಕೆ ಈಗಿನ ಯೂಕ್ರೇನ್-ರಷ್ಯಾ ನಡುವಿನ ಯುದ್ಧವೇ ಸಾಕ್ಷಿ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ಇನ್ನೊಂದು ಮಹಾಯುದ್ಧ ಎದುರಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಘೋರ ಸಂಘರ್ಷ ತಪ್ಪಿಸಿ ಜನರು ಶಾಂತಿ-ನೆಮ್ಮದಿ ಮತ್ತು ಸಮಾಧಾನದಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕಿದೆ ಎಂದರು.
ರಾಜೇಂದ್ರ ಶ್ರೀಗಳು ಮಾತೃವಾತ್ಸಲ್ಯ ಸ್ವರೂಪಿ. ಅವರೊಬ್ಬ ಪರಂಪರೆ ಮತ್ತು ಆಧುನಿಕತೆಯ ಸಮನ್ವಯಕಾರರು. ಆಧುನಿಕ ಅಗತ್ಯತೆಗಳಿಗೆ ತಕ್ಕಂತೆ ಶಿಕ್ಷಣ, ಆರೋಗ್ಯ ಇನ್ನಿತರ ಸೇವಾ ಕಾರ್ಯಗಳನ್ನು ವಿಸ್ತಾರಗೊಳಿಸಿದರು. ಜತೆಗೆ, ಧಾರ್ಮಿಕ, ಸಾಂಸ್ಕೃತಿಕ, ಸೇವಾ ಕಾರ್ಯಗಳ ಮೂಲಕ ಮಠದ ಜವಾಬ್ದಾರಿಯನ್ನು ಅರ್ಥಪೂರ್ಣವಾಗಿಸಿದರು. ದಣಿವರಿಯದ ಕಾರ್ಯದಲ್ಲಿ ನಿರತರಾಗಿದ್ದ ಅವರು ಮಕ್ಕಳ ಶಿಕ್ಷಣಕ್ಕೆ ಅವಿರತ ಶ್ರಮಿಸಿದರು ಎಂದು ಹೇಳಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ಲಕ್ಷ್ಮೀಜಿ ಅವರು ರಾಜ್ಯಪಾಲರು ಸೇರಿದಂತೆ ಇತರ ಗಣ್ಯರಿಗೆ ರಾಖಿ ಕಟ್ಟಿದರು. ಮೇಯರ್ ಸುನಂದಾ ಪಾಲನೇತ್ರ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಜರಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಅವರ ಸಂದೇಶವನ್ನು ಸಚಿವ ಎಸ್.ಟಿ.ಸೋಮಶೇಖರ್ ಓದಿದರು.
ಸಿಎಂ ಸಂದೇಶದ ಸಾರಾಂಶ:ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಲೋಕಕಲ್ಯಾಣಕ್ಕಾಗಿ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ಅನ್ನ, ಅರಿವು, ಆರೋಗ್ಯ, ಸಮಾಜ ಸುಧಾರಣೆ, ಧರ್ಮಜಾಗೃತಿ, ಅಧ್ಯಾತ್ಮ ಕ್ಷೇತ್ರದಲ್ಲಿ ಭದ್ರಬುನಾದಿ ಹಾಕಿದ್ದಾರೆ. ಶ್ರೀಗಳು ಶಾಂತಿ-ಧಾರ್ಮಿಕ ಸಾಮರಸ್ಯದ ರೂವಾರಿ. ಜನರು ಸೌಹಾರ್ದಯುತವಾಗಿ ಬದುಕಲು ಸ್ಫೂರ್ತಿಯಾಗಿದ್ದಾರೆ ಎಂದು ಸಿಎಂ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.