ಸರಗೂರು: ಒಬ್ಬ ವ್ಯಕ್ತಿಯ ಜೀವನದಲ್ಲಿ ಮಹಿಳೆಯ ಪಾತ್ರ ತುಂಬಾ ಮಹತ್ವದ್ದು. ಆಕೆ ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ ಬಾಳಿಗೆ ಬೆಳಕಾಗುತ್ತಾಳೆ ಎಂದು ಸ್ನೇಹ ಸ್ತ್ರೀ ಸಮಾಜದ ಅಧ್ಯಕ್ಷೆ ಸುಧಾ ಮೃತ್ಯುಂಜಯಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಜೆಎಸ್‌ಎಸ್ ಶಿವರಾತ್ರಿ ಶಿವಾನುಭವ ಮಂಟಪದಲ್ಲಿ ಮಂಗಳವಾರ ಸ್ನೇಹ ಸ್ತ್ರೀ ಸಮಾಜ ಹಾಗೂ ಜೆಎಸ್‌ಎಸ್ ವಿದ್ಯಾ ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನಲ್ಲಿ ಬಹುತೇಕ ವಿಚಾರಗಳಿಗೆ ಒಂದೊಂದು ದಿನ ಮೀಸಲಿಟ್ಟಿರುವಂತೆ ಮಹಿಳೆಯರಿಗೂ ಒಂದು ವಿಶೇಷ ದಿನ ಮೀಸಲಿಡಲಾಗಿದೆ. ಇದು ಮಹಿಳೆಯರ ಮಹತ್ವವನ್ನು ತಿಳಿಸುತ್ತದೆ. ಸಮಾಜದ ಕಟ್ಟುಪಾಡುಗಳ ಹೊರತಾಗಿ ಆಧುನಿಕ ದಿನಗಳಲ್ಲಿ ಮಹಿಳೆ ಸಾಧನೆಯ ಶಿಖರವನ್ನು ಮುಟ್ಟುತ್ತಿದ್ದಾಳೆ. ವಿಶ್ವದಾದ್ಯಂತ ಮಹಿಳೆಯರು ಸಾಧನೆಯ ಮುಂಚೂಣಿಯಲ್ಲಿದ್ದಾರೆ ಎಂದರು.
ತಹಸೀಲ್ದಾರ್ ಮೋಹನಕುಮಾರಿ ಮಾತನಾಡಿ, ಸಮಾನತೆಯ ಜತೆಗೆ ಒಗ್ಗಟ್ಟಿನಲ್ಲಿ ಮಹಿಳೆಯರು ಸದಾ ಮುಂದಿರುವುದು ದೇಶದ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಅನುಕೂಲವಾಗಲಿದೆ. ಮಹಿಳೆಯರಿಗೆ ಪ್ರೇರಣೆ ನೀಡಿ ಎಲ್ಲ ಕ್ಷೇತ್ರದಲ್ಲೂ ಅವಕಾಶ ಕೊಡುವುದರಿಂದ ಮುಂದಿನ ಮಹತ್ತರ ಬೆಳವಣಿಗೆಗೆ ದಾರಿ ದೀಪವಾಗಲಿದೆ ಎಂದು ಹೇಳಿದರು.
ಜೆಎಸ್‌ಎಸ್ ಜನ ಶಿಕ್ಷಣ ಸಂಸ್ಥೆ ನಿರ್ದೇಶಕ ರಮೇಶ್, ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಮಾತನಾಡಿದರು. ವೃತ್ತಿ ಕೌಶಲ ತರಬೇತಿ ಪಡೆದವರಿಗೆ ಪ್ರಮಾಣಪತ್ರ ನೀಡಲಾಯಿತು.
ಪಪಂ ಸದಸ್ಯ ಶ್ರೀನಿವಾಸ, ಸ್ನೇಹ ಸ್ತ್ರೀ ಸಮಾಜದ ಕಾರ್ಯದರ್ಶಿ ಸೀಮಾ ಮೋಹನ್‌ಕುಮಾರ್, ಉಪಾಧ್ಯಕ್ಷೆ ಶೋಭಾ, ಮಂಜುಳಾ, ಮಂಗಳಾ, ರಜನಿ ಆದೇಶ್, ಪುಷ್ಪಾ ಶಾಂತರಾಜು, ರಶ್ಮಿ ದಾಸ್, ರೇಣುಕಾ, ಪುಷ್ಪಾ ಮಹೇಶ್, ಶೀಲಾ ದಯಾನಂದ್, ಸುಮಾ ಮಹೇಶ್, ಉಮಾ ಪ್ರತಾಪ್, ಮಂಜುಳಾ ಪ್ರವೀಣ್, ವಿವೇಕಾನಂದ ಆಸ್ಪತ್ರೆ ಸಿಬ್ಬಂದಿ ಸಂಧ್ಯಾ, ಜೆಎಸ್‌ಎಸ್ ಜನ ಶಿಕ್ಷಣ ಸಂಸ್ಥೆ ಕಾರ್ಯಕ್ರಮಾಧಿಕಾರಿ ಸೌಭಾಗ್ಯಾ, ಸುರೇಶ್ ಕುಮಾರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ, ಪಪಂ ಆರೋಗ್ಯಾಧಿಕಾರಿ ಅನಿತಾ ಕುಮಾರಿ, ಸಂಘದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.