ವಿಜಯವಾಣಿ ಸುದ್ದಿಜಾಲ ಧಾರವಾಡ
ಇಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಅರಿವು ಪ್ರತಿಯೊಬ್ಬ ವಿದ್ಯಾರ್ಥಿಗೆ ಅಗತ್ಯ. ನೌಕರಿ ಪಡೆಯಲು ಅಧ್ಯಯನ, ಸಮಯ ಪ್ರಜ್ಞೆ, ಪ್ರಾಮಾಣಿಕತೆ, ವಿಷಯದ ಪೂರ್ಣ ಮಾಹಿತಿ ಜತೆಗೆ ಕೋಚಿಂಗ್ ಕ್ಲಾಸ್‌ಗಳ ಮಾರ್ಗದರ್ಶನವೂ ಮುಖ್ಯ ಎಂದು ಕರ್ನಾಟಕ ಡಿಎನ್‌ಎ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಪ್ರಮೋದ ಗಾಯಿ ಹೇಳಿದರು.
ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಕ್ಲಾಸಿಕ್ ಮಹಾವಿದ್ಯಾಲಯದ 2022-23ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಲಾಸಿಕ್ ಕಾಲೇಜಿನ ಪ್ರಾಚಾರ್ಯ ಡಾ. ಜಿ. ಹೆಗಡೆ ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕೃತಿ ಮತ್ತು ಸಂಸ್ಕಾರ ಬೆಳೆಸಿಕೊಳ್ಳುವುದರ ಜತೆಗೆ ಜೀವನದ ಗುರಿ ಮುಟ್ಟಲು ಕಠಿಣ ಶ್ರಮ ಅಗತ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ಲಾಸಿಕ್ ಸಂಸ್ಥೆ ಸಂಸ್ಥಾಪಕ ಲಕ್ಷ್ಮಣ ಉಪ್ಪಾರ ಮಾತನಾಡಿ, ವಿದ್ಯಾರ್ಥಿಗಳು ಆತ್ಮ ವಿಶ್ವಾಸ ಕಳೆದುಕೊಳ್ಳಬಾರದು. ವಿದ್ಯಾರ್ಥಿಗಳು ಗುರು, ತಂದೆ- ತಾಯಿ ಮಾರ್ಗದರ್ಶನದ ಜತೆಗೆ ಸತತ ಅಧ್ಯಯನ ರೂಢಿಸಿಕೊಳ್ಳಬೇಕು. ಹೀಗಾಗಿ ಪರೀಕ್ಷೆ ಪೂರ್ವ ಸಮಗ್ರ ಅಧ್ಯಯನ ನಡೆಸಿ ಜಯ ಸಾಧಿಸಬೇಕು ಎಂದರು.
ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಆಡಳಿತ ಮಂಡಳಿ ಸದಸ್ಯರು, ಇತರರು ಇದ್ದರು.