ಜಿಲ್ಲೆ

ಸಾಧನೆಗೆ ಶ್ರದ್ಧೆ ಏಕಾಗ್ರತೆ ಮುಖ್ಯ

ತುಮಕೂರು: ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಪ್ರಗತಿ ಮತ್ತು ವ್ಯಕ್ತಿತ್ವ ಬೆಳೆಸುವಲ್ಲಿ ನಮ್ಮ ಸಂಸ್ಥೆ ಬದ್ಧವಾಗಿದೆ ಎಂದು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಿ.ಪಾರಸ್​ಮಲ್​ ಹೇಳಿದರು.

ನಗರದ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯಲ್ಲಿ 2024&-25ನೇ ಶೈಕ್ಷಣಿಕ ಸಾಲಿನ ವಾರ್ಷಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಶ್ರದ್ಧೆ, ಏಕಾಗ್ರತೆ ಯಿಂದ ಸಾಧನೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಗುರುಗಳ ಮಾರ್ಗದರ್ಶನಲ್ಲಿ ವಿದ್ಯಾರ್ಥಿಗಳು ಸಾಗಬೇಕು ಎಂದರು.

ಶಾಲೆಯ ಹಳೆಯ ವಿದ್ಯಾರ್ಥಿ ರಾಜೀವ್​ ವೇಲೂರ್​ ಮಾತನಾಡಿ, ಪ್ರತಿಭೆ ಸಾಧಕನ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ. ಯಶಸ್ಸು ಮತ್ತು ವೈಫಲ್ಯ ಎರಡನ್ನೂ ಸೌಜನ್ಯದಿಂದ ಪ್ರತಿಯೊಬ್ಬರೂ ಸ್ವೀಕರಿಸಬೇಕು. ಶಿಕ್ಷಕರು, ಪಾಲಕರು ಮತ್ತು ಸಮಾಜವನ್ನು ಗೌರವಿಸುವುದು ಮುಖ್ಯ. ಸೋಷಿಯಲ್​ ಮೀಡಿಯಾಗಳಿಂದ ದೂರವಿದ್ದು, ತಮ್ಮ ಗುರಿಯ ಕಡೆಗೆ ಮನಸ್ಸನ್ನು ಕೇಂದ್ರೀಕೃತಗೊಳಿಸಿಕೊಳ್ಳುವಂತೆ ಸಲಹೆ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಚನ್ನಬಸವಪ್ರಸಾದ್​, ಜಂಟಿ ಕಾರ್ಯದರ್ಶಿ ಡಾ.ಟಿ.ಆರ್​.ಸಾಯಿಪ್ರಸಾದ್​, ಆಡಳಿತ ಮಂಡಳಿಯ ಕೆ.ಜಿ.ಮುನಿಗಂಗಪ್ಪ,ಕೆ.ವಿ.ಶ್ರೀನಿವಾಸ್​, ಸುರೇಂದ್ರ ಷಾ ಮತ್ತು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರು ಉಪಸ್ಥಿತರಿದ್ದರು.