ಚಿತ್ತಾಪುರದಲ್ಲಿ ಮಂಗಳವಾರ ಏರ್ಪಡಿಸಿದ್ದ ಯುವ ಜಾಗೃತಿ ಯಾತ್ರೆ ಕಾರ್ಯಕ್ರಮದಲ್ಲಿ ಚಿಂತಕ ಪ್ರೊ.ಸಿದ್ದು ಯಾಪಲಪರವಿ ಉಪನ್ಯಾಸ ನೀಡಿದರು. ಕಸಾಪ ತಾಲೂಕು ಅಧ್ಯಕ್ಷ ವೀರೇಂದ್ರ ಕೊಲ್ಲೂರ, ಜಗದೀಶ ಕಡಬಗಾಂವ್, ಡಾ.ಶಿವಶರಣಪ್ಪ ಬಿರಾದಾರ್, ಶಂಕರ ಸುಲೇಗಾಂವ್, ನಾಗಯ್ಯ ಸ್ವಾಮಿ ಅಲ್ಲೂರ ಇದ್ದರು.  
ಜಿಲ್ಲೆ

ಸಾಧನೆಗೆ ಬೇಕು ಸತತ ಪ್ರಯತ್ನ

ಚಿತ್ತಾಪುರ: ಯುವ ಸಮೂಹ ತಮ್ಮ ಗುರಿ ಸಾಧನೆಗೆ ಛಲಬಿಡದೆ ಸತತ ಪ್ರಯತ್ನ ಮಾಡಬೇಕೆಂದು ಚಿಂತಕ ಪ್ರೊ.ಸಿದ್ದು ಯಾಪಲಪರವಿ ಸಲಹೆ ನೀಡಿದರು.

ಪಟ್ಟಣದ ಆರ್‌ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಕಾಸ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ ಮತ್ತು ಸ್ನಾತಕೋತ್ತರ ಸಂಶೋಧನಾ ಕೇಂದ್ರದ ಸಹಯೋಗದಡಿ ಮಂಗಳವಾರ ಏರ್ಪಡಿಸಿದ್ದ ಯುವ ಜಾಗೃತಿ ಯಾತ್ರೆ, ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಅನೇಕ ಕಹಿ ಪ್ರಸಂಗಗಳು ಎದುರಾದರೂ ಮೆಟ್ಟಿ ನಿಂತು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.

ಒಂದು ತರಗತಿ ಹತ್ತು ಪುಸ್ತಕಗಳಿಗೆ ಸಮಾನ. ಹೀಗಾಗಿ ವಿದ್ಯಾರ್ಥಿಗಳು ಕ್ಲಾಸ್‌ನಿಂದ ತಪ್ಪಿಸಿಕೊಳ್ಳಬಾರದು. ಮಾದಕ ವ್ಯಸನಿಗಳಿಂದ ದೂರವಿದ್ದು ಅಕ್ಷರ ಕಲಿಕೆಯತ್ತ ಚಿತ್ತ ಹರಿಸಬೇಕು. ಜಾತಿ, ಧರ್ಮ ದೂರವಿಟ್ಟು ಸಾಧನೆ ಹಾದಿಯಲ್ಲಿ ಸಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಹೇಳಿದರು.

ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ನಿವೃತ್ತ ಉಪನ್ಯಾಸಕ ಜಗದೀಶ ಕಬಡಗಾಂವ್ ಮಾತನಾಡಿ, ಪ್ರೊ.ಸಿದ್ದು ಯಾಪಲಪರವಿ ಮಾತುಗಳು ದಾರಿದೀಪವಾಗಿವೆ. ಅವರಲ್ಲಿ ಜ್ಞಾನದ ಖಣಿಯಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಯುವಕರ ಮನಸ್ಸುಗಳನ್ನು ಕಟ್ಟುವಲ್ಲಿ ಅವರ ಶ್ರಮ ನಿರಂತರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ.ಶಿವಶರಣಪ್ಪ ಬಿರಾದಾರ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ವೀರೇಂದ್ರ ಕೊಲ್ಲೂರ ಮಾತನಾಡಿದರು. ಡಾ.ಶರಣಪ್ಪ ಸೈದಾಪುರ, ಡಾ.ಮಲ್ಲಪ್ಪ ಮಾನೆಗಾರ, ಡಾ.ಸಂತೋಷ ಜಾಧವ್, ಎಂ.ಎಂ. ಮೇತ್ರಿ, ಶ್ರೀಕಾಂತ ಒಮ್ಮಣ್ಣ, ಡಾ.ಅನೀಲ ಮಂದೋಲಕರ್, ಡಾ.ಶರಣಪ್ಪ ರಾಮತೀರ್ಥ, ಪ್ರೇಮಸಿಂಗ್ ಚವ್ಹಾಣ್, ಡಾ.ಹೀನಾ ಬೇಗಂ, ಡಾ.ಶಶಿಧರ ಯಡ್ರಾಮಿ, ಮಹ್ಮದ್ ಇಬ್ರಾಹಿಂ, ರಾಮಣ್ಣ ಡೋಣಗಾಂವ್, ಕಾಶೀರಾಯ ಕಲಾಲ್ ಇತರರಿದ್ದರು.

ವಿಕಾಸ ಅಕಾಡೆಮಿ ಜಿಲ್ಲಾಧ್ಯಕ್ಷ ಶಂಕರ ಸುಲೇಗಾಂವ್ ಪ್ರಾಸ್ತಾವಿಕ ಮಾತನಾಡಿದರು. ಡಾ.ಪಂಡಿತ ಬಿ.ಕೆ. ನಿರೂಪಣೆ ಮಾಡಿದರು. ವಿಕಾಸ ಅಕಾಡೆಮಿ ಸಂಘಟಕ ನಾಗಯ್ಯ ಸ್ವಾಮಿ ಅಲ್ಲೂರ ಸ್ವಾಗತಿಸಿದರು. ಅಕಾಡೆಮಿ ತಾಲೂಕು ಸಂಚಾಲಕ ಮನೋಹರ ಹಡಪದ ವಂದಿಸಿದರು.

ಸರ್ಕಾರಿ ನೌಕರಿಗೆ ಕಾಯದೆ ಅಗತ್ಯ ಕೌಶಲ ಬೆಳೆಸಿಕೊಂಡು ಪ್ರತಿಭೆಯಿಂದ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಬೇಕು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ರಸ್ತೆ ನಿರ್ಮಿಸುವುದು ಅಷ್ಟೇ ಅಭಿವೃದ್ಧಿ ಅಲ್ಲ. ಮಾನವ ಸಂಪನ್ಮೂಲ ಸರಿಯಾಗಿ ಬಳಕೆಯಾಗುವ ಅಗತ್ಯವಿದೆ.

| ಪ್ರೊ.ಸಿದ್ದು ಯಾಪಲಪರವಿ ಚಿಂತಕ