ದುಡಿಯೋಣ ಬಾ ಸ್ತ್ರೀಚೇತನ ಅಭಿಯಾನ ಮತ್ತು ನರೇಗಾ ಕೂಲಿ ಕಾರ್ಮಿಕರಿಗಾಗಿ ಸಿರಗಾಪುರ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ತಾಪಂ ಇಒ ರಮೇಶ ಸುಲ್ಫಿ, ಎಡಿ (ಮನರೇಗಾ) ಮಹ್ಮದ್ ಸಲೀಂ ಅವರು ಕಾರ್ಮಿಕರಿಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ ವಿತರಿಸಿದರು. 
ಜಿಲ್ಲೆ

ಸಾಧನೆಗೆ ಬೇಕು ಉತ್ತಮ ಆರೋಗ್ಯ

ಬಸವಕಲ್ಯಾಣ: ಉದ್ಯೋಗ ಅರಸಿ ಗ್ರಾಮೀಣ ಭಾಗದ ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಲು ಅಭಿಯಾನ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ ಸುಲ್ಫಿ ಹೇಳಿದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆ, ಆರೋಗ್ಯ ಇಲಾಖೆ ಮತ್ತು ಐಇಸಿ ಸಹಯೋಗದಡಿ ಸಿರಗಾಪುರ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ದುಡಿಯೋಣ ಬಾ, ಸ್ತ್ರೀಚೇತನ ಅಭಿಯಾನ ಮತ್ತು ನರೇಗಾ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ. ನರೇಗಾ ಕಾರ್ಮಿಕರು ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು. ಖಾತ್ರಿ ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಇರಬೇಕು. ವೃದ್ಧರು, ವಿಕಲಾಂಗರಿಗೆ ನರೇಗಾ ಕೆಲಸದಲ್ಲಿ ರಿಯಾಯತಿ ನೀಡಬೇಕು ಎಂದು ಸ್ಥಳದಲ್ಲಿದ್ದ ಯೋಜನೆ ಸಿಬ್ಬಂದಿಗೆ ಸೂಚಿಸಿದರು.

ಹಾರಕೂಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾವತಿ ಮೂಲಗೆ, ತಾಪಂ ಸಹಾಯಕ ನಿರ್ದೇಶಕ(ನರೇಗಾ) ಮಹ್ಮದ್ ಸಲೀಂ, ಪಿಡಿಒ ಜ್ಯೋತಿ ಕಾವಡೆ, ಐಇಸಿ ಸಂಯೋಜಕ ವೀರಾರೆಡ್ಡಿ, ಟಿಎ ಇಸ್ಮಾಯಿಲ್, ಗ್ರಾಪಂ ಸದಸ್ಯರಾದ ವಿಠ್ಠಲ್ ಜಮಾದಾರ್, ಸಿದ್ರಾಮ ಹೆಗಡೆ ಉಪಸ್ಥಿತರಿದ್ದರು. ಡಿಇಒ ಗಣೇಶ ನಿರೂಪಣೆ ಮಾಡಿದರು.

ನಂತರ ಗದಲೆಗಾಂವ್ ತಾಂಡಾಕ್ಕೆ ತೆರಳಿದ ಇಒ ರಮೇಶ ಸುಲ್ಫಿ ಹಾಗೂ ಎಡಿ ಮಹ್ಮದ್ ಸಲೀಂ ಅವರು ಕುಡಿಯುವ ನೀರಿನ ಸಮಸ್ಯೆ ಅರಿತು ಬಗೆಹರಿಸಿದರು.

ಕೂಲಿಕಾರ್ಮಿಕರ ಮಕ್ಕಳ ಲಾಲನೆ-ಪಾಲನೆಗಾಗಿ ಆಯಾ ಗ್ರಾಪಂ ಕೇಂದ್ರ ಸ್ಥಾನದಲ್ಲಿ ಕೂಸಿನ ಮನೆ ಪ್ರಾರಂಭಿಸಲಾಗಿದೆ. ಮಕ್ಕಳ ನೋಡಿಕೊಳ್ಳಲು ಆರೈಕೆದಾರರ ನೇಮಿಸಿದ್ದು, ಆರು ತಿಂಗಳಿಂದ ಮೂರು ವರ್ಷದೊಳಗಿನ ಮಕ್ಕಳನ್ನು ಕೂಸಿನ ಮನೆಯಲ್ಲಿ ಬಿಡಬಹುದು. ಮಕ್ಕಳು ಓದಿನಿಂದ ವಿಮುಕ್ತವಾಗದಂತೆ ಅರಿವು ಕೇಂದ್ರಗಳನ್ನು ತೆರೆಯಲಾಗಿದೆ.

| ರಮೇಶ ಸುಲ್ಫಿ ಇಒ, ತಾಪಂ ಬಸವಕಲ್ಯಾಣ