ವಿಜಯವಾಣಿ ಸುದ್ದಿಜಾಲ ಧಾರವಾಡ
ಸಾಧನೆಗೆ ಅಂಗವಿಕಲತೆ, ಬಡ ಸೇರಿ ಯಾವುದೇ ಸಮಸ್ಯೆಗಳು ಅಡ್ಡಿಯಾಗುವುದಿಲ್ಲ. ಆದರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಛಲ ಮನುಷ್ಯನಲ್ಲಿ ಇರಬೇಕು ಎಂದು ತಾರಿಹಾಳ ಅಡವಿಸಿದ್ದೇಶ್ವರ ಮಠದ ಶ್ರೀ ಅಡಿವೇಶ ದೇವರು ಹೇಳಿದರು.
ನಗರದ ಕೃಷಿ ವಿಶ್ವವಿದ್ಯಾಲಯ ಬಳಿಯ ಸಾಧುನವರ ಎಸ್ಟೇಟ್‌ನ ಶ್ರೀ ಸಾಯಿ ಗಾರ್ಡನ್‌ನಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಸುಬ್ರಮಣ್ಣೇಶ್ವರ ಸ್ವಾಮಿ ದೇವಸ್ಥಾನ ಲೋಕಾರ್ಪಣೆ ಮತ್ತು ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಶುಕ್ರವಾರ ಪ್ರವಚನ ನೀಡಿದರು.
ಶ್ರೀ ಕುಮಾರ ಸ್ವಾಮೀಜಿ ಪುಟ್ಟರಾಜ ಗವಾಯಿಗಳ ಗಾಯನ ಕೇಳಿ ತಮ್ಮ ಬಳಿಯೇ ಇಟ್ಟುಕೊಂಡು ಸಾಧನೆ ಮಾಡುವಂತೆ ಮಾಡಿದರು. ನಂತರ ಪುಟ್ಟರಾಜ ಗವಾಯಿಗಳು ತಮ್ಮಂತೆಯೇ ಅಂಧರಾಗಿದ್ದ ಸಾವಿರಾರು ಮಕ್ಕಳಿಗೆ ಆಶ್ರಯ ನೀಡಿ ಸಂಗೀತ ಕಲಿಸಿದರು. ಹೀಗೆ ಸಾಧನೆಗೆ ಅಂಗವಿಕಲತೆ ಅಡ್ಡಿಯಯಾಗುವುದಿಲ್ಲ ಎಂಬುದನ್ನು ಇವರು ಸಾಬೀತು ಮಾಡಿದ್ದಾರೆ ಎಂದರು.
ಭಗವಂತ ಯಾವುದೇ ಫಲಾಪೇಕ್ಷೆ ಇಲ್ಲದೆ ಮನುಷ್ಯನಿಗೆ ಎಲ್ಲವನ್ನೂ ನೀಡಿದ್ದಾನೆ. ನಾವು ಅದನ್ನು ಸದ್ಬಳಕೆ ಮಾಡಿಕೊಂಡು ದಾನ, ಧರ್ಮ ಮಾಡುವ ಮೂಲಕ ಸತ್ಯ, ಧರ್ಮದ ಮಾರ್ಗದಲ್ಲಿ ನಡೆಯಬೇಕು. ಅಹಂಕಾರ, ದುರ್ನಡತೆ ಬಿಟ್ಟು ವಿನಯದಿಂದ ಬಾಳಿದಾಗಲೇ ಇಡೀ ಸಮಾಜ ಶಾಂತವಾಗಿರಲು ಸಾಧ್ಯ ಎಂದರು.
ಇದಕ್ಕೂ ಪೂರ್ವದಲ್ಲಿ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಬಡಾವಣೆಯಲ್ಲಿ ಕುಂಭ ಮೆರವಣಿಗೆ ಜರುಗಿತು. ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವೀರಭದ್ರಯ್ಯ ಹಿರೇಮಠ, ವೀರಭದ್ರಯ್ಯ ಪಾಟೀಲ, ಗುರುರಾಜ ತುರಮರಿ, ಅನ್ನದಾನಿ ಚೌಕಿಮಠ, ಗುರುನಾಥ ಮುತ್ತಗಿ, ಸ್ವಪ್ನಿಲ್ ಸಾಬಳೆ, ಸಂಗಮೇಶ್ವರಿ ಮಠದ, ಎಸ್.ಆರ್. ಮಠದ, ಮಂಜುನಾಥ ಹಿರೇಮಠ, ರಾಣಿ ಚೆನ್ನಮ್ಮ ಮಹಿಳಾ ಸಂಘದ ಪದಾಧಿಕಾರಿಗಳು, ಇತರರು ಇದ್ದರು.