ಬೀದರ್: ಮನುಷ್ಯನಾಗಿ ಜನಿಸಿದ ಬಳಿಕ ಏನಾದರೊಂದು ಸಾಧನೆ ಮಾಡಬೇಕು. ಅದರ ಮುಖಾಂತರ ನಮ್ಮ ಹೆಜ್ಜೆಗುರುತು ಬಿಡಬೇಕು. ಸಾಧನೆ ಮಾಡಿದ ಪ್ರತಿಭೆಗಳಿಗೆ ಮಾತ್ರ ಜಗತ್ತು ಗೌರವಿಸುತ್ತದೆ ಎಂದು ಹೆಡಗಾಪುರ ಶಿವಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ದಾರೂಕಲಿಂಗ ಶಿವಾಚಾರ್ಯ ನುಡಿದರು.
ಜಿಲ್ಲಾ ಜಂಗಮ ಸಮಾಜದಿಂದ ಲಾಡಗೇರಿ ಹಿರೇಮಠ ಸಂಸ್ಥಾನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಝೀ ವಾಹಿನಿಯ ಸರಿಗಮಪ-೨೧ರ ವಿಜೇತೆ ಶಿವಾನಿ ಶಿವದಾಸ ಸ್ವಾಮಿ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಧನೆ ಮಾಡಿ ಸತ್ತರೆ ಸ್ವರ್ಗದಲ್ಲೂ ಸನ್ಮಾನ ಸಿಗುತ್ತದೆ. ಸಾಧನೆ ಮಾಡದಿದ್ದರೆ ಅವಮಾನ ಮಾಡಿಕೊಂಡಂತೆ. ಹೀಗಾಗಿ ನಮ್ಮ ಬದುಕು ಸದಾ ಬೆಳಗಬೇಕಾದರೆ ಸಾಧನೆ ಬಹಳ ಮುಖ್ಯ ಎಂದರು.
ಸಾನ್ನಿಧ್ಯ ವಹಿಸಿದ್ದ ಹಲಬರ್ಗಾ ರಾಚೋಟೇಶ್ವರ ಮಠದ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯ ಮಾತನಾಡಿ, ಸಂಗೀತದಲ್ಲಿ ಸಾಧನೆ ಮಾಡುವುದು ಅಷ್ಟು ಸುಲಭವಲ್ಲ. ಹಿರಿಯರ ಮಾರ್ಗದರ್ಶನ, ಪ್ರೋತ್ಸಾಹ ಜತೆಗೆ ಸೂಕ್ತ ವೇದಿಕೆ ಸಿಗಬೇಕು. ಸಂಗೀತ ಕ್ಷೇತ್ರದಲ್ಲಿ ಶಿವಾನಿ ಸ್ವಾಮಿ ಸಾಧನೆ ಶ್ಲಾಘನೀಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದ ಜಿಲ್ಲಾ ಗೌರವಾಧ್ಯಕ್ಷ ಪ್ರೊ.ಎಸ್.ವಿ. ಕಲ್ಮಠ ಮಾತನಾಡಿ, ಸಮಾಜ ಸಂಘಟಿಸುವಲ್ಲಿ ಮಠಗಳ ಪಾತ್ರ ಬಹಳಷ್ಟಿದೆ. ಇದರಿಂದ ಶಿವಾನಿಯಂಥ ಪ್ರತಿಭೆಗಳು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗಲಿದೆ ಎಂದರು.
ಸಂಗೀತ ವಿದ್ವಾಂಸ ಡಾ.ರಾಜೇಂದ್ರಸಿಂಗ ಪವಾರ್ ಮಾತನಾಡಿದರು. ಲಾಡಗೇರಿ ಹಿರೇಮಠದ ಶ್ರೀ ಗಂಗಾಧರ ಶಿವಾಚಾರ್ಯ, ಚಾಂಬೋಳದ ಶ್ರೀ ಅಭಿನವ ರುದ್ರಮುನಿ ಶಿವಾಚಾರ್ಯ, ಏಕತಾ ಫೌಂಡೇಷನ್ ಅಧ್ಯಕ್ಷ ರವೀಂದ್ರ ಸ್ವಾಮಿ, ರೇಣುಕ ಮಹೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಅಧ್ಯಕ್ಷ ಮಹೇಶ್ವರ ಸ್ವಾಮಿ, ಗಂಗಾಧರ ಶಾಸಿ, ಮಲ್ಲಪ್ಪ ಹುಲೆಪ್ಪನೋರ್, ಚಂದ್ರಕಾಂತ ಅಷ್ಟೂರ, ಕವಿತಾ, ಶಿವದಾಸ ಸ್ವಾಮಿ, ಅಶ್ವಿನಿ, ರಾಜಕುಮಾರ ಸ್ವಾಮಿ ಇತರರಿದ್ದರು. ಶಿವಕುಮಾರ ಸ್ವಾಮಿ ಸ್ವಾಗತಿಸಿದರು. ವಿದ್ಯಾವತಿ ಹಿರೇಮಠ ನಿರೂಪಣೆ ಮಾಡಿದರು. ಶ್ರೀಕಾಂತ ಸ್ವಾಮಿ ಸೋಲಪುರ ವಂದಿಸಿದರು.