ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿ, ಕೆಲಸದಲ್ಲಿ ಸಾಧನೆ ತೋರಿದ ವಿವಿಧ ಇಲಾಖೆ ಅಧಿಕಾರಿಗಳನ್ನು ಸನ್ಮಾನಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್ ಜಿಲ್ಲಾಡಳಿತಕ್ಕೆ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ವಿಶೇಷ ಸಾಧಕರನ್ನು ಸನ್ಮಾನಿಸಲಾಗುತ್ತದೆ. ಇದೇ ಮಾದರಿಯಲ್ಲಿ ವಿವಿಧ ಇಲಾಖೆಗಳ ಉತ್ತಮ ಕೆಲಸಗಾರರನ್ನು ಗುರುತಿಸಬೇಕು. ಪ್ರತಿ ತಿಂಗಳು ತಲಾ 5 ಮಂದಿ ಹೆಸರು ಪ್ರಕಟಿಸಿ, ಅವರ ಸಾಧನೆ ಬಗ್ಗೆ ಪ್ರಚಾರ ಕೈಗೊಳ್ಳಬೇಕು. ಇದರಿಂದ ಇತರರಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಪ್ರೇರಣೆಯಾಗುತ್ತದೆ ಎಂದರು.
ಬಾಗೇಪಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 14 ಕಡೆ ವೈದ್ಯರ ಕೊರತೆ ಇದೆ. ಹಿಂದುಳಿದ ಪ್ರದೇಶ ಮತ್ತು ಕಡಿಮೆ ಸಂಬಳದ ಹಿನ್ನೆಲೆಯಲ್ಲಿ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ ಬಿ.ಎಂ.ಯೋಗೀಶ್‌ಗೌಡ ಮಾಹಿತಿ ನೀಡಿದಾಗ ಮಧ್ಯಪ್ರವೇಶಿಸಿದ ಸಚಿವರು, ಬಾಗೇಪಲ್ಲಿಯ ಉಳಿದ ಕಡೆ ವೈದ್ಯರು ಕಾರ್ಯನಿರ್ವಹಿಸುತ್ತಿರುವಾಗ ಹಿಂದುಳಿದ ಪ್ರದೇಶದ ಸಬೂಬು ಹೇಳುವುದು ಸರಿಯಲ್ಲ ಎಂದು ಹೇಳಿ ಕರೊನಾ ಸೋಂಕಿನ ಆತಂಕದ ವಾತಾವರಣದಲ್ಲಿ ಗುತ್ತಿಗೆ ವೈದ್ಯರ ವೇತನವನ್ನು 50 ಸಾವಿರದಿಂದ 70 ಸಾವಿರಕ್ಕೆ ಏರಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದರು.
ಶಿಡ್ಲಘಟ್ಟ ತಾಲೂಕಿನ ಮಳ್ಳೂರು, ಮೇಲೂರು ಸೇರಿ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಸಮರ್ಪಕವಾಗಿ ಆಹಾರ ಪದಾರ್ಥಗಳ ವಿತರಣೆಯಾಗದಿರುವುದರ ಬಗ್ಗೆ ಜಿಪಂ ಉಪಾಧ್ಯಕ್ಷೆ ಪಿ.ನಿರ್ಮಲಾ ಮುನಿರಾಜು ಆರೋಪಿಸಿದರು.
ಜಿಲ್ಲಾಧಿಕಾರಿ ಆರ್.ಲತಾ, ಸಿಇಒ ಬಿ.ಫೌಜೀಯಾ ತರನ್ನಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್ ಮತ್ತಿತರರು ಇದ್ದರು.
ಸುಬ್ಬಾರೆಡ್ಡಿ ಆಕ್ಷೇಪ : ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಡಾಂಬರು ಹಾಕಿ ರಸ್ತೆ ನಿರ್ಮಿಸಲಾಗಿದೆ. ಇದರ ಬಗ್ಗೆ ಸ್ಥಳೀಯ ಅಧಿಕಾರಿಗಳನ್ನು ಕೇಳಿದಾಗ ಗ್ರಾಪಂನಿಂದ ಅನುಮೋದನೆ ಪಡೆಯಲಾಗಿದೆ ಎಂಬ ಉತ್ತರ ಹೇಳುತ್ತಿದ್ದು ಇದಕ್ಕೆ ಅವಕಾಶವಿದೆಯೇ? ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪ್ರಶ್ನಿಸಿದರು. ಬಾಗೇಪಲ್ಲಿ ಆಸ್ಪತ್ರೆಯಲ್ಲಿನ ವೈದ್ಯರನ್ನು ಜಿಲ್ಲಾ ಕೇಂದ್ರಕ್ಕೆ ನಿಯೋಜಿಸುತ್ತಿರುವುದರಿಂದ ರೋಗಿಗಳು ಪರದಾಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೊನೆಗೆ ನಿಯಮ ಉಲ್ಲಂಘಿಸಿ ರಸ್ತೆ ನಿರ್ಮಾಣದ ಬಗ್ಗೆ ವರದಿ ಸಲ್ಲಿಸಲು ಮತ್ತು ವೈದ್ಯರ ಸಮಸ್ಯೆ ಪರಿಹಾರಕ್ಕೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.