ಜಿಲ್ಲೆ

ಸಾಧಕರಾಗಲು ಪುರಸ್ಕಾರ ಪ್ರೇರಣೆ

ಚಿತ್ರದುರ್ಗ: ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗೆ ಪುರಸ್ಕರಿಸುವುದು ಇತರರೂ ಸಾಧನೆಗೈಯಲು ಪ್ರೇರಣೆಯಾಗಲಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್ ಸಲಹೆ ನೀಡಿದರು.

ತರಾಸು ರಂಗಮಂದಿರದಲ್ಲಿ ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿಯಿಂದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಮುಸ್ಲಿಂ ವಿದ್ಯಾರ್ಥಿಗಳಿಗಾಗಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು.

ಅಧಿಕ ಅಂಕ ಪಡೆಯುವುದು ಕಡಿಮೆ ಸಾಧನೆಯಲ್ಲ. ಪ್ರತಿಭಾವಂತ ಮಕ್ಕಳ ಬೆನ್ನೆಲುಬಾಗಿ ಸಮಾಜದ ಮುಖಂಡರಿದ್ದಾರೆ ಎಂಬುದಕ್ಕೆ ಇಂತಹ ಕಾರ್ಯಕ್ರಮ ನಿದರ್ಶನ. ಮುಸ್ಲಿಂ ಸಮುದಾಯದಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಮಾನ ಅವಕಾಶವಿದೆ ಎಂದರು.

ವಕೀಲ ಬಿ.ಕೆ.ರಹಮತ್‌ವುಲ್ಲಾ ಮಾತನಾಡಿ, ಮಕ್ಕಳಿಗಾಗಿ ಹಣ-ಆಸ್ತಿ ಸಂಪಾದಿಸುವ ಬದಲು ಶಿಕ್ಷಣವನ್ನೇ ಬಹುದೊಡ್ಡ ಸಂಪತ್ತಾಗಿಸಿಕೊಳ್ಳಲು, ಉನ್ನತ ಹುದ್ದೆಗೆ ಏರಲು ಪಾಲಕರು ಪ್ರೋತ್ಸಾಹಿಸಿ. ಸಾಧಕರಾಗುವ ಬೀಜವನ್ನು ಬಿತ್ತಿ ಎಂದು ಸಲಹೆ ನೀಡಿದರು.

ರಾಜಕೀಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಆದ್ಯತೆ ಸಿಗುತ್ತಿಲ್ಲ. ಈವರೆಗೂ ಕೇವಲ ಮತ ಹಾಕಿಸಿಕೊಳ್ಳಲು ಸೀಮಿತ ಮಾಡಿಕೊಂಡಿದ್ದಾರೆ. ಆದರೆ, ಉನ್ನತ ಅಧಿಕಾರ ನೀಡುತ್ತಿಲ್ಲ. ಎಂ.ಕೆ.ತಾಜ್‌ಪೀರ್ ಅವರನ್ನು ನಾಮನಿರ್ದೇಶಿತ ಎಂಎಲ್ಸಿಯಾಗಿ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಅಧ್ಯಕ್ಷ ಟಿಪ್ಪು ಖಾಸಿಂ ಆಲಿ ಮಾತನಾಡಿ, ಶಿಕ್ಷಣ ಪಡೆಯಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲೀಗ ಸಾಕಷ್ಟು ಸೌಕರ್ಯಗಳಿವೆ. ಅದನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾವಂತರಾಗುವ ಮೂಲಕ ಸಮುದಾಯದ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಧಾರ್ಮಿಕ ಚಿಂತಕ ಮೌಲಾನಾ ಎಜಾಜುಲ್ಲಾ, ಅಕಾಡೆಮಿ ಅಧ್ಯಕ್ಷ ಎಂ.ಹನೀಫ್, ಕಾರ್ಯಾಧ್ಯಕ್ಷ ನವೀದ್ ಅಬ್ದುಲ್ಲಾ, ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ, ವಕೀಲರಾದ ದಿಲ್‌ಶಾದ್ ಉನ್ನಿಸ, ಸಮೀವುಲ್ಲಾ, ಮುಖಂಡರಾದ ಎ.ಸಾಧಿಕ್‌ವುಲ್ಲಾ, ಮುದಸಿರ್ ನವಾಜ್, ಸೈಯದ್ ವಲಿಖಾದ್ರಿ ಇತರರಿದ್ದರು.