ಜಿಲ್ಲೆ

ಸಾಧಕರನ್ನು ಗುರುತಿಸಿ ಪುರಸ್ಕರಿಸುವ ಕೆಲಸವಾಗಲಿ

ಕೋಲಾರ: ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರಗತಿಯತ್ತ ಕೊಂಡೊಯ್ದು ನಾಡಿಗೆ ಕೀರ್ತಿ ತರುವ ಕೆಲಸ ಮಾಡುವ ಸಾಧಕರನ್ನು ಗುರುತಿಸಿ ಪ್ರೋತ್ಸಾಹ, ಪುರಸ್ಕಾರ ನೀಡಬೇಕು ಎಂದು ಭಾರತ ಸೇವಾ ದಳದ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಆಶಿಸಿದರು.

ನಗರದ ಕುರುಬರಪೇಟೆಯಲ್ಲಿ ವಿಶ್ವಮಾನವ ಕುವೆಂಪು ಫೌಂಡೇಶನ್‌ನಿಂದ ಗುರುವಾರ ಹಮ್ಮಿಕೊಂಡಿದ್ದ ಮಾಜಿ ಯೋಧ, ಚುಟುಕು ಸಾಹಿತಿ ಪಿ.ನಾರಾಯಣಪ್ಪ ಅವರಿಗೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕುವೆಂಪು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು

ಜಿಲ್ಲೆಯಲ್ಲಿ ಕನ್ನಡ ಕೆಲಸ ನಿರಂತರ ನಡೆಯುತ್ತಿವೆ. ವಿಶ್ವಮಾನವ ಕುವೆಂಪು ಫೌಂಡೇಶನ್, ಮನ್ವಂತರ ಪ್ರಕಾಶನ, ಚುಟುಕು ಸಾಹಿತ್ಯ ಪರಿಷತ್ ಸೇರಿ ಇನ್ನಿತರ ಸಂಸ್ಥೆಗಳು ಸಣ್ಣ-ಸಣ್ಣ ಕಾರ್ಯಕ್ರಮಗಳ ಮೂಲಕ ನಾಡು-ನುಡಿಯ ತೇರನ್ನು ಜಿಲ್ಲಾದ್ಯಂತ ಪಸರಿಸುತ್ತಿವೆ ಎಂದರು.

ದೇಶ ಸೇವೆ ಮತ್ತು ಕನ್ನಡ ಸೇವೆಗೆ ಬದುಕು ಮುಡುಪಾಗಿಟ್ಟಿರುವ ವ್ಯಕ್ತಿಗಳ ಸಾಧನೆ ಮತ್ತು ಸೇವೆ ಗುರುತಿಸಿ ಪುರಸ್ಕಾರ ನೀಡುವುದರಿಂದ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಶ್ರೀಮಂತಗೊಳ್ಳುತ್ತದೆ ಎಂದರು. 16 ವರ್ಷ ದೇಶ ರಕ್ಷಣೆಗೆ ಶ್ರಮಿಸಿ ನಂತರ ಕನ್ನಡಪರ ಚಟುವಟಿಕೆಗಳಿಗೆ ಜೀವ ತುಂಬಿದ ಪಿ.ನಾರಾಯಣಪ್ಪ ಪ್ರಶಸ್ತಿಗೆ ಅರ್ಹರು. ಜಿಲ್ಲೆಯ ಇನ್ನಷ್ಟು ಸಾಧಕರಿಗೆ ಈ ಅವಕಾಶ ಸಿಗಲಿ ಎಂದು ಹಾರೈಸಿದರು.

ಕಸಾಪ ನಿಕಟಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜು ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಸಾಧಕರಿದ್ದಾರೆ, ಅವರನ್ನು ಗುರುತಿಸುವುದು ಸಂಘ-ಸಂಸ್ಥೆಗಳ ಕರ್ತವ್ಯ ಎಂದರು. ಜಿಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಪ್ರಶಸ್ತಿಗಳು ಗೌರವ ತಂದುಕೊಡುವುದಲ್ಲದೆ, ಜವಾಬ್ದಾರಿ ಹೆಚ್ಚಿಸುತ್ತವೆ. ಸಂಘ-ಸಂಸ್ಥೆಗಳು ಅರ್ಹರನ್ನು ಗುರುತಿಸಿ ಜಿಲ್ಲೆಯಲ್ಲಿ ಕನ್ನಡಪರ ಕೆಲಸಗಳಿಗೆ ಶಕ್ತಿ ತುಂಬಬೇಕು ಎಂದರು.

ವಿಜಯವಾಣಿ ಹಿರಿಯ ವರದಿಗಾರ, ಮನ್ವಂತರ ಪ್ರಕಾಶನ ಸಂಸ್ಥಾಪಕ ಪಾ.ಶ್ರೀ.ಅನಂತರಾಮ್ ಪಿ.ನಾರಾಯಣಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಪುರಸ್ಕೃತರ ಪತ್ನಿ ನಿವೃತ್ತ ಮುಖ್ಯಶಿಕ್ಷಕಿ ಪದ್ಮಾವತಮ್ಮ ಅವರನ್ನೂ ಸನ್ಮಾನಿಸಲಾಯಿತು.

ಕನ್ನಡ ಉಪನ್ಯಾಸಕ ಅಶ್ವತ್ಥ್‌ಗೌಡ, ವಿಕೆಎಫ್ ರಾಜ್ಯಾಧ್ಯಕ್ಷ ಲಕ್ಕೂರು ಎಂ.ನಾಗರಾಜ್, ತಾಲೂಕು ಅಧ್ಯಕ್ಷ ಸೋಮಶೇಖರ್, ಕವಿಗಳಾದ ಡಾ.ಶರಣಪ್ಪ ಗಬ್ಬೂರ್, ಡಾ.ಪುಷ್ಪಲತಾ, ಗಾಯಕ ಅಮರನಾಥ್, ಕನ್ನಡ ಸಿರಿ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಟಿ.ಸುಬ್ಬಾರಾಯಪ್ಪ, ಖಜಾಂಚಿ ಕೆ.ಎನ್.ಪರಮೇಶ್ವರನ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಜಿಲ್ಲಾಧ್ಯಕ್ಷ ಮುನಿರಾಜು, ಮಾಸ್ತೆನಹಳ್ಳಿ ನಾರಾಯಣಸ್ವಾಮಿ, ಕನ್ನಡ ಸಾಹಿತ್ಯ-ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಎಸ್.ಸಿ.ವೆಂಕಟಕೃಷ್ಣ, ಪ್ರಮುಖರಾದ ವಿ.ಮುನಿರಾಜ್, ಕೆ.ಎನ್.ಪರಮೇಶ್ವರನ್, ಕನ್ನಡ ಪರ ಹೋರಾಟಗಾರ ಅ.ಕೃ.ಸೋಮಶೇಖರ್, ಕಲಾವಿದ ಡ್ಯಾನಿಡ್ ಕೃಷ್ಣಮೂರ್ತಿ, ಕನ್ನಡ ಸಿರಿ ಎಂ.ಸೋಮಶೇಖರ್, ಬೆಂಗಳೂರು ಆಟೋ ಚಾಲಕರ ಒಕ್ಕೂಟದ ಅಧ್ಯಕ್ಷ ಕಾರ್ತಿಕ್ ಉಪಸ್ಥಿತರಿದ್ದರು.