ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿ ನಡೆದ ಮಾನಸೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ವಿ.ಕೆ.ಜಗದೀಶ್, ಡಾ.ಕೆ.ಎನ್.ಲಿಂಗೇಗೌಡ, ಎಸ್.ಪಿ.ರಮೇಶ್, ಡಾ.ಗುಬ್ಬಿಗೂಡು ರಮೇಶ್, ಸಿ.ಎಚ್.ಕಾಳೀರಯ್ಯ, ಪ್ರವೀಣ್‌ಕುಮಾರ್, ಎಚ್.ಎಂ. ಶರತ್ ಇದ್ದರು. 
ಜಿಲ್ಲೆ

ಸಾಧಕರ ಜೀವನ ಚರಿತ್ರೆಯನ್ನು ಮೈಗೂಡಿಸಿಕೊಳ್ಳಿ


ಮದ್ದೂರು: ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲಿಯೇ ಸಾಧಕರ ಜೀವನ ಚರಿತ್ರೆಗಳನ್ನು ಮೈಗೂಡಿಸಿಕೊಂಡಲ್ಲಿ ದೇಶದ ಸತ್ಪ್ರಜೆಗಳಾಗಿ ರೂಪುಗೊಂಡು ಭವಿಷ್ಯದ ನಾಯಕರಾಗಿ ಹೊರಹೊಮ್ಮಲು ಸಹಕಾರಿಯಾಗುತ್ತದೆ ಎಂದು ಬೆಂಗಳೂರು ವಾಣಿಜ್ಯ ತೆರಿಗೆ ಇಲಾಖೆ ಅಪರ ಆಯುಕ್ತೆ ಕೆ.ಆರ್.ನಂದಿನಿ ತಿಳಿಸಿದರು.

ತಾಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿ ಮಾನಸ ವಿದ್ಯಾಸಂಸ್ಥೆ ವತಿಯಿಂದ ಭಾನುವಾರ ಆಯೋಜಸಿದ್ದ ಮಾನಸೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದ, ಡಾ.ಬಿ.ಆರ್.ಅಂಬೇಡ್ಕರ್, ಲಾಲ್ ಬಹದ್ದೂರ್ ಶಾಸ್ತ್ರಿ, ರಾಷ್ಟ್ರಕವಿ ಕುವೆಂಪು ಸೇರಿದಂತೆ ಆದರ್ಶ ವ್ಯಕ್ತಿಗಳ ಪುಸ್ತಕಗಳನ್ನು ಹೆಚ್ಚು ಹೆಚ್ಚು ಅಧ್ಯಯನ ಮಾಡುವ ಮೂಲಕ ತಾವು ಸಾಧಕರಾಗಿ ಹೊರ ಹೊಮ್ಮಬೇಕು. ಜಿಲ್ಲೆಯಲ್ಲಿ ಗ್ರಾಮೀಣ ಸೊಗಡಿನ ಸಂಸ್ಕೃತಿ ಉಳಿದಿದ್ದು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮಲ್ಲಿರುವ ಪ್ರತಿಭೆ ಅನಾವರಣಗೊಳಿಸಬೇಕೆಂದರು.

ಮೈಸೂರು ಕೇಂದ್ರ ಸಂವಹನ ಇಲಾಖೆಯ ಉಪ ನಿರ್ದೇಶಕಿ ಡಾ.ಟಿ.ಸಿ.ಪೂರ್ಣಿಮಾ ಮಾತನಾಡಿ, ಮಾನಸ ವಿದ್ಯಾಸಂಸ್ಥೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಕ್ಷರದಾಸೋಹ ನೀಡುವ ಮೂಲಕ ಜ್ಞಾನಾರ್ಜನೆ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಕಾರ್ಯಕ್ರಮದಲ್ಲಿ ಖ್ಯಾತ ಚರ್ಮರೋಗ ತಜ್ಞ ಡಾ.ಎಸ್.ಪಿ.ಶಂಕರೇಗೌಡಗೆ ಸ್ವಾತಂತ್ರ್ಯ ಹೋರಾಟಗಾರ ಡಿ.ಕರಡೀಗೌಡ ವೈದ್ಯ ಸೇವಾ ರತ್ನ ಪ್ರಶಸಿ ಹಾಗೂ ಮೈಸೂರು ಕೇಂದ್ರ ಸಂವಹನ ಇಲಾಖೆಯ ಉಪ ನಿರ್ದೇಶಕಿ ಡಾ.ಟಿ.ಸಿ. ಪೂರ್ಣಿಮಾಗೆ ಸ್ವಾತಂತ್ರ್ಯ ಹೋರಾಟಗಾರ ಡಿ.ಕರಡೀಗೌಡ ಅವರ ಸಾಹಿತ್ಯ ಸಮ್ಮಾನ್ ಪ್ರಶಸ್ತಿ ನೀಡಲಾಯಿತು. ಬೆಂಗಳೂರು ವಾಣಿಜ್ಯ ತೆರಿಗೆ ಇಲಾಖೆ ಅಪರ ಆಯುಕ್ತೆ ಕೆ.ಆರ್. ನಂದಿನಿ ಅವರನ್ನು ಗೌರವಿಸಲಾಯಿತು.
ಬೆಂಗಳೂರು ವಿಶ್ರಾಂತ ಕುಲಸಚಿವ ಡಾ.ಕೆ.ಎನ್.ಲಿಂಗೇಗೌಡ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಅಭಿಯಂತರ ಎಸ್.ಪಿ.ರಮೇಶ್, ಖ್ಯಾತ ಅಂಕಣಕಾರ ಡಾ.ಗುಬ್ಬಿಗೂಡು ರಮೇಶ್, ಬಿಇಒ ಸಿ.ಎಚ್.ಕಾಳೀರಯ್ಯ, ಸಂಸ್ಥೆ ಅಧ್ಯಕ್ಷ ವಿ.ಕೆ.ಜಗದೀಶ್, ಪ್ರಾಂಶುಪಾಲ ಪ್ರವೀಣ್‌ಕುಮಾರ್, ಮುಖ್ಯಶಿಕ್ಷಕ ಎಚ್.ಎಂ. ಶರತ್ ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಜರಿದ್ದರು.