ಜಿಲ್ಲೆ

ಸಾಧಕರ ಆದರ್ಶ ಪಾಲನೆಗೆ ನಿರಾಸಕ್ತಿ: ಶಿವರುದ್ರ ಸ್ವಾಮೀಜಿ

ಮೈಸೂರು: ಸಾಧನೆ ಮಾಡಿದವರನ್ನು ಹೊಗಳುತ್ತೇವೆಯೇ ವಿನಃ, ಸಾಧನೆ ಮಾಡಿದವರ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಲು ಯತ್ನಿಸುವುದಿಲ್ಲ ಎಂದು ಬೇಲಿಮಠದ ಶ್ರೀ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಭಗವಾನ್ ಶ್ರೀರಾಮಕೃಷ್ಣ ಪರಮಹಂಸರ 188ನೇ ಜನ್ಮ ದಿನೋತ್ಸವ ಹಾಗೂ ಆಶ್ರಮದ ವಾರ್ಷಿಕೋತ್ಸವದಲ್ಲಿ ಶುಕ್ರವಾರ ಅವರು ಶ್ರೀರಾಮಕೃಷ್ಣರ ಮತ್ತು ಬಸವೇಶ್ವರರ ದೃಷ್ಠಿಕೋನದಲ್ಲಿ ಧರ್ಮ ಮತ್ತು ಆಧ್ಯಾತ್ಮ ವಿಷಯ ಕುರಿತು ಅವರು ಪ್ರವಚನ ನೀಡಿದರು.
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಮಹಾನುಭವರು ಸಾಧನೆ ಮಾಡಿದ್ದಾರೆ. ಅವರ ಸಾಧನೆಯನ್ನು ನಾವೆಲ್ಲರೂ ಹೊಗಳುತ್ತೇವೆ. ಅವರ ಜನ್ಮ ದಿನಗಳನ್ನು ಆಚರಿಸುತ್ತೇವೆ. ಆದರೆ ಅವರು ಮಾಡಿದ ಸಾಧನೆ, ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಮರೆಯುತ್ತೇವೆ ಎಂದರು.
ಹಿಂದಿನವರು ನಮ್ಮ ಧರ್ಮ, ಸಂಸ್ಕೃತಿ, ಪರಂಪರೆಯನ್ನು ಬಹು ಉನ್ನತ ಸ್ಥಾನಕ್ಕೆ ಕೊಂಡೊಯ್ದಿದ್ದರು. ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋದಲ್ಲಿ ಹಿಂದು ಧರ್ಮದ ಕುರಿತು ಭಾಷಣ ಮಾಡಿದ ಬಳಿಕ ಭಾರತದ ಸ್ಥಾನ ಇನ್ನಷ್ಟು ಎತ್ತರಕ್ಕೇರಿತು ಎಂದು ಹೇಳಿದರು.
ಶ್ರೀರಾಮಕೃಷ್ಣ ಪರಮಹಂಸರ ಅವರಂತೆ 12ನೇ ಶತಮಾನದಲ್ಲಿಯೇ ಬಸವಾಧಿ ಶರಣರು, ಜಾತಿ, ಮತ, ಪಂಥಗಳನ್ನು ಬಿಟ್ಟು ಎಲ್ಲರೂ ಒಂದೇ ಎನ್ನುವ ಭಾವನೆ ಬಿತ್ತಲು ಶ್ರಮಿಸಿದರು. ಜಾತಿ, ಮತ ಇಲ್ಲದ ಅಧ್ಯಾತ್ಮಿಕ ಧರ್ಮವನ್ನು ಅನುಸರಿಸುವಂತೆ ಪ್ರಚಾರ ಮಾಡಿದರು. ಎಲ್ಲ ಧರ್ಮ, ಮತಗಳ ಬೇರೆ ಬೇರೆ ಅಲ್ಲ, ಒಂದೇ ನಾಣ್ಯದ ಎರಡು ಮುಖಗಳು. ಆಚರಣೆ ಮಾತ್ರ ಬೇರೆ ಬೇರೆ ಎನ್ನುವ ಸಂದೇಶ ಸಾರಿದರು ಎಂದರು.
ಆದರೆ ಇಂದು ಆಧುನೀಕತೆಯ ನೆರಳಿನಲ್ಲಿ ಧರ್ಮ, ಮತಗಳು ಬೇರೆ ಬೇರೆ ಎನ್ನುವ ಭಾವನೆಯನ್ನು ಜನರಲ್ಲಿ ಭಿತ್ತಲಾಗುತ್ತಿದೆ. ಇದು ವಿಶ್ವದಲ್ಲಿಯೇ ಆಶಾಂತಿ ಮೂಡಲು ಕಾರಣವಾಗುತ್ತಿದೆ. ಆದ್ದರಿಂದ ನಮ್ಮ ಹಿರಿಯರು ಹಾಕಿಕೊಟ್ಟಿರುವ ಧರ್ಮ, ಸಂಸ್ಕೃತಿಯನ್ನು ಪಾಲಿಸಿಕೊಂಡು ಶಾಂತಿ ಕಾಪಾಡುವುದು, ಸಾಧ್ಯವಾದಷ್ಟು ಇತರರಿಗೆ ನೆರವಾಗುವುದು ಮುಖ್ಯ ಎಂದು ಸಲಹೆ ನೀಡಿದರು.
ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದ ಸಾನ್ನಿಧ್ಯ ವಹಿಸಿದ್ದರು. ಪ್ರವಚನದ ಬಳಿಕ ವಿದ್ವಾನ್ ಶಿವಾನಂದ ಭಟ್ ಅವರಿಂದ ಗಾನಸುಧಾ ರಸ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.