ದಾವಣಗೆರೆ: ತಂತ್ರಜ್ಞಾನದತ್ತ ಬೆನ್ನು ಹತ್ತಿರುವ ಮಾನವರಿಗೆ ಒತ್ತಡ, ವ್ಯಾಕುಲತೆ ಹಾಗೂ ಖಿನ್ನತೆಗಳು ಸಹ ಕಾಯಿಲೆಗಳಂತೆ ಕಾಡುತ್ತಿವೆ. ಇದಕ್ಕೆ ಸಾಂಘಿಕ ಮತ್ತು ಸಾತ್ವಿಕ ಚಟುವಟಿಕೆಗಳಿಂದ ಪರಿಹಾರ ಸಾಧ್ಯ ಎಂದು ವಾಗ್ಮಿ ಎಚ್.ಬಿ.ಮಂಜುನಾಥ ಹೇಳಿದರು.
ಜಯದೇವ ವೃತ್ತದ ಅಧ್ಯಾತ್ಮ ಮಂದಿರದಲ್ಲಿ ಶ್ರೀ ಶಿವಾನಂದ ತೀರ್ಥ ಗುರುಗಳ 75ನೇ ಪುಣ್ಯಾರಾಧನಾ ಮಹೋತ್ಸವ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಸಾಮೂಹಿಕ ಭಜನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಭಜ’ ಎಂದರೆ ಹಂಚಿಕೊಳ್ಳುವುದು ಎಂಬ ಅರ್ಥವಿದೆ. ಪರಮಾತ್ಮನ ಆನಂದವನ್ನು ಹಂಚಿಕೊಳ್ಳುವುದಕ್ಕೂ ಭಜನೆ ಎನ್ನಲಾಗುತ್ತದೆ. ಇಂತಹ ಭಜನೆಗಳು ಮನಸ್ಸಿನ ಒತ್ತಡ, ಖಿನ್ನತೆ ನಿವಾರಿಸಿ ಆನಂದವನ್ನು ನೀಡುತ್ತವೆ ಎಂದು ತಿಳಿಸಿದರು.
ಭಜನೆಗಳಲ್ಲಿ ಬಳಸುವ ನಾಮ ಸಂಕೀರ್ತನೆಗಳು ಅಥವಾ ಶ್ಲೋಕ ಪದ್ಯಗಳಾಗಲೀ ಆನಂದ ನೀಡುವಂತಿರಬೇಕು. ಕರ್ಕಶ ವಾದ್ಯಗಳ ಕುಟ್ಟುವಿಕೆ-ತಟ್ಟುವಿಕೆಯ ಆರ್ಭಟ, ತಾರಕವಾದ ಕಿರುಚಾಟ ವಿಧಾನವಾಗಲೀ ಭಜನೆಗಳಿಗೆ ಯೋಗ್ಯವಲ್ಲ ಎಂದರು.
ಭಜನೆ ಹಾಡುವವರು ಮತ್ತು ಕೇಳುಗರ ಮನಸ್ಸುಗಳನ್ನು ಭಗವಂತನ ಆನಂದದತ್ತ ಏಕಾಗ್ರವಾಗಿ ಕೊಂಡೊಯ್ಯುವಂತಿರಬೇಕು. ಇದನ್ನೇ ಶಿವಾನಂದ ಎನ್ನುತ್ತಾರೆ. ಶಿವ, ವಿಷ್ಣು ಹಾಗೂ ಬ್ರಹ್ಮ ಎಂದರೆ ಸತ್ಯ ಹಾಗೂ ಸುಂದರವೇ ಆಗಿದೆ. ಇದನ್ನು ಅರಿತು ಪರಮಾತ್ಮ ಭಾವದಲ್ಲಿ ಬೆರೆಯುವುದೇ ಅದ್ವೈತ. ಅದುವೇ ಜೀವನ್ಮುಕ್ತಿಯಾಗಿದೆ ಎಂದು ಹೇಳಿದರು.
ವಾಸವಿ ಭಜನಾ ಮಂಡಳಿಯವರು ಭಜನಾ ಕಾರ್ಯಕ್ರಮ ನೆರವೇರಿಸಿದರು. ಅಧ್ಯಾತ್ಮ ಮಂದಿರದ ರಾಜನಹಳ್ಳಿ ಹರಿಹರಪ್ಪ ಟ್ರಸ್ಟಿನ ಶ್ರೀಧರ ಶ್ರೇಷ್ಠಿ ಇತರರಿದ್ದರು.
---