ಎನ್.ಆರ್.ಪುರ: ಚಿಕ್ಕ ಅಗ್ರಹಾರ ವಲಯ ವ್ಯಾಪ್ತಿಯ ಅಳೇಹಳ್ಳಿ 8ನೇ ಮೈಲಿಕಲ್ ಸಮೀಪದ ಕೂಸ್ಗಲ್ ಮೀಸಲು ಅರಣ್ಯದಲ್ಲಿ ಸಾಗುವಾನಿ ಮರ ಕಡಿದು ಸಾಗಿಸಲು ಯತ್ನಿಸುತ್ತಿದ್ದ ಇಬ್ಬರನ್ನು ಗುರುವಾರ ರಾತ್ರಿ ಅರಣ್ಯಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಮೇಲ್‌ಪಾಲ್‌ನ ಮಿಥುನ್, ಕೃಷ್ಣ ಬಂಧಿತ ಆರೋಪಿಗಳು. ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಸ್ಗಲ್ ಮೀಸಲು ಅರಣ್ಯ ವ್ಯಾಪ್ತಿಯ ಸಾಗುವಾನಿ ನೆಡುತೋಪಿಗೆ ಬಂದಾಗ ಮರ ಕಡಿದು ಸಾಗಿಸಲು ಸಿದ್ಧತೆ ಮಾಡಿರುವುದು ಕಂಡುಬಂದಿದೆ. ಸ್ಥಳದಲ್ಲಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಸಾಗಣೆ ಮಾಡಲು ತಂದ ವಾಹನವನ್ನು ವಶಪಡಿಸಿಕೊಂಡರು. ವಿಚಾರಣೆ ನಡೆಸಿದಾಗ ಮರ ಕಳವಿನಲ್ಲಿ ಇತರ 6 ಜನ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇತರ ಆರೋಪಿಗಳಾದ ಕೌಶಿಕ್, ಅಕ್ಷಯ, ಅಶ್ವತ್ಥ್, ರಿಷಿಕಾಂತ, ನವೀನ್, ಆಷಿಕ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಎಂ.ಪಿ.ಆದರ್ಶ ನೇತೃತ್ವದಲ್ಲಿ ಚಿಕ್ಕಅಗ್ರಹಾರ ಉಪ ವಲಯ ಅರಣ್ಯಾಧಿಕಾರಿ ನಂದೀಶ, ಕುದುರೆಗುಂಡಿ ಉಪ ವಲಯ ಅರಣ್ಯಾಧಿಕಾರಿ ರಂಗನಾಥ, ಗಸ್ತು ಅರಣ್ಯ ಪಾಲಕರಾದ ಆರ್.ಪ್ರತಾಪ್, ಕೆ.ರಂಗನಾಥ, ಎಚ್.ನಾಗರಾಜ, ಎಂ.ಡಿ.ಲೋಹಿತ್, ಚಾಲಕರಾದ ನಾಗರಾಜ, ಪವನ್ ಕಾರ್ಯಾಚರಣೆಯಲ್ಲಿ ಇದ್ದರು.