ಎನ್.ಆರ್.ಪುರ: ನೆಲಗದ್ದೆ ಗ್ರಾಮದ ಆರಂಬಳ್ಳಿ ಮೀಸಲು ಅರಣ್ಯ ಕೊಡಿಹಳ್ಳಿ ಅರಣ್ಯದಲ್ಲಿ ಸಾಗುವಾನಿ ಮರ ಕಳ್ಳ ಸಾಗಣೆ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಬಂಧಿಸಿದರು.
ಪಟ್ಟಣದ ಸುಂಕದಕಟ್ಟೆ ನಿವಾಸಿ ಸತ್ಯನಾರಾಯಣ ಮತ್ತು ಕೆಇಬಿ ಕಾಲನಿ ಹಿಂಭಾಗದ ನಿವಾಸಿ ರಂಗಪ್ಪ ಬಂಧಿತ ಆರೋಪಿಗಳು. ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುವ ವೇಳೆ ಪಿಕಪ್ ವಾಹನದಲ್ಲಿ 3 ಸಾಗುವಾನಿ ಮರದದಿಮ್ಮಿ ತುಂಬಿಸಿದ್ದನ್ನು ಕಂಡು ವಿಚಾರಿಸಿದಾಗ ಆರೋಪಿಗಳು ಮಾಹಿತಿ ನೀಡಿದ್ದಾರೆ. ನಾಟ, ಸಾಗುವಾನಿ ಮರದ ದಿಮ್ಮಿಗಳು, ಸಾಗಣೆ ಮಾಡಲು ಬಳಸಿದ್ದ ವಾಹನ, ಮರ ಪಾಲಿಷ್ ಮಾಡುವ ಯಂತ್ರ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹೊಸ ಮನೆ ನಿರ್ಮಾಣಕ್ಕೆ ಸಾಗುವಾನಿ ಮರ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಎನ್.ಪ್ರವೀಣ್‌ಕುಮಾರ್, ಉಪವಲಯ ಅರಣ್ಯಾಧಿಕಾರಿ ಗೌಸ್ ಮೋಹಿದ್ದಿನ್, ಗಸ್ತು ಅರಣ್ಯ ಪಾಲಕ ರುದ್ರೇಶ್ ನಾಯ್ಕ, ವಿಠಲ ರಸ್ತೆ ಗಸ್ತು ಅರಣ್ಯಪಾಲಕ ಸಂದೀಪ್ ಪಾಲ್ಗೊಂಡಿದ್ದರು.