ಜಿಲ್ಲೆ

ಸಾಗುವಳಿದಾರರಿಗೆ ಭೂ ಮಂಜೂರಾತಿಗೆ ಆಗ್ರಹ

ಚಿತ್ರದುರ್ಗ: ಬಗರ್‌ಹುಕುಂ ಸಾಗುವಳಿದಾರರಿಗೆ ಭೂ-ಮಂಜೂರಾತಿಗೆ ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆಗೆ ಒನ್‌ಟೈಮ್ ಸೆಟಲ್‌ಮೆಂಟ್ ಮೂಲಕ ಪರಿಹಾರ ನೀಡುವುದೂ ಸೇರಿ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಸಿಎಂಗೆ ಮನವಿ ರವಾನಿಸಿದರು.

ಲಕ್ಷಾಂತರ ಜನರು ಅರಣ್ಯಭೂಮಿ ಸಾಗುವಳಿ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಮೂರ‌್ನಾಲ್ಕು ದಶಕದಿಂದಲೂ ಭೂಮಿ ಹಕ್ಕಿಗಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಆದರೂ, ಸಮಸ್ಯೆ ಬಗೆಹರಿದಿಲ್ಲ ಎಂದು ಅಳಲು ತೋಡಿಕೊಂಡರು.

ರಾಜ್ಯದಾದ್ಯಂತ ಲಕ್ಷಾಂತರ ಮಂದಿ ಬಡವರು ಫಾರಂ ನಂ. 50, 53, ಹಾಗೂ 57ರಲ್ಲಿ ಅರ್ಜಿ ಸಲ್ಲಿಸಿದರೂ ಅರ್ಹರಿಗೆ ಭೂಮಿ ಹಕ್ಕು ಸಿಕ್ಕಿಲ್ಲ. ಸರ್ಕಾರಿ ಕಚೇರಿಯಿಂದ ವಿಧಾನಸೌಧದವರೆಗೂ ಅಲೆದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಅರ್ಜಿಗಳನ್ನು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಭೂ ಮಂಜೂರಾತಿಗೆ ಅಡ್ಡಿಯಾಗಿರುವ ಕಾನೂನನ್ನು ತಿದ್ದುಪಡಿ ಮಾಡಬೇಕು. ಅರ್ಜಿಸಲ್ಲಿಸಿ ಸಾಗುವಳಿ ಮಾಡುತ್ತಿರುವ ಭೂರಹಿತ ಕುಟುಂಬಗಳಿಗೆ ಭೂಮಿ ಮಂಜೂರಾತಿ ನೀಡಬೇಕು. ಈಗಾಗಲೇ ಸಾಗುವಳಿ ಚೀಟಿ ಪಡೆದ ರೈತರಿಗೆ ಅವರ ಹೆಸರಿನಲ್ಲಿ ಪಹಣಿ ನೀಡಬೇಕು ಎಂದು ಆಗ್ರಹಿಸಿದರು.

ಗೊಂದಲದಲ್ಲಿರುವ ಅರಣ್ಯ, ಕಂದಾಯ ಇಲಾಖೆ ಭೂಮಿಗಳ ಜಂಟಿ ಸರ್ವೇ ನಡೆಸಬೇಕು. ಯಾವ ಕಾರಣಕ್ಕೂ ಇಲ್ಲಿನ ಜನರನ್ನು ಒಕ್ಕಲೆಬ್ಬಿಸಬಾರದು. ಸಾಗುವಳಿ ಮಾಡದೆ ಬೀಳು ಬಿಟ್ಟಿರುವ ಭೂಮಿಗಳನ್ನು ಹೊರತುಪಡಿಸಿ, ಅರ್ಜಿ ಹಾಕಿ ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿಗಳನ್ನು ಕುರಿಗಾಯಿಗಳಿಗೆ ಕುರಿ ಮೇಯಿಸಲು ಮುಕ್ತ ಅವಕಾಶದ ಪ್ರಸ್ತಾಪ ಕೈಬಿಡಬೇಕು ಎಂದು ಒತ್ತಾಯಿಸಿದರು.

ವಸತಿ ರಹಿತರಿಗೆ ನಿವೇಶನ, ವಸತಿ ಸೌಲಭ್ಯ ಕಲ್ಪಿಸಬೇಕು. ಇದಕ್ಕಾಗಿ ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲೂ ಯೋಜನೆ ರೂಪಿಸಬೇಕು ಎಂದು ಸರ್ಕಾರವನ್ನು ಕೋರಿದರು.

ರೈತ ಮುಖಂಡ ಈಚಘಟ್ಟ ಸಿದ್ಧವೀರಪ್ಪ, ಚಿಂತಕ ಜೆ.ಯಾದವರೆಡ್ಡಿ, ಹನುಮಂತಪ್ಪ ದುರ್ಗ ಮಾತನಾಡಿದರು. ಸಮಿತಿ ಜಿಲ್ಲಾಧ್ಯಕ್ಷ ಸತ್ಯಪ್ಪ ಮಲ್ಲಾಪುರ, ಮುಖಂಡರಾದ ಕುಮಾರ್ ಸಮತಳ, ರಾಜಪ್ಪ, ಎಚ್. ನಾಗರಾಜ್, ಹನುಮಂತಣ್ಣ ಗೋನೂರು, ನಾಗರಾಜಪ್ಪ ನೆಲಗೇತಲಹಳ್ಳಿ, ಕರಿಯಪ್ಪ ಈಚಘಟ್ಟ, ಅಂಜನಪ್ಪ, ಮಂಜಣ್ಣ, ತಿಪ್ಪಣ್ಣ, ಲಕ್ಷ್ಮೀದೇವಿ, ಕರಿಯಪ್ಪ ಇತರರಿದ್ದರು.