ಎಚ್.ಡಿ.ಕೋಟೆ: ಸಾಗುವಳಿ ಹಕ್ಕುಪತ್ರಕ್ಕಾಗಿ ಅಹೋರಾತ್ರಿ ಧರಣಿ ನಡೆಸುತ್ತಿದ್ದ ರೈತರು ಶಾಸಕ ಅನಿಲ್ ಚಿಕ್ಕಮಾದು ಹಾಗೂ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಅವರ ಭರವಸೆ ಹಿನ್ನೆಲೆಯಲ್ಲಿ ಶುಕ್ರವಾರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟರು.
ಅಕ್ರಮ ಸಕ್ರಮ ಸಮಿತಿ ನಾಲ್ಕೈದು ತಿಂಗಳಿಂದ ಸಮರ್ಪಕವಾಗಿ ಸಭೆ ನಡೆಸದೆ, ಸಾಗುವಳಿ ಪತ್ರ ನೀಡಲು ವಿಳಂಬ ನೀತಿ
ಅನುಸರಿಸುತ್ತಿದೆ ಎಂದು ಆರೋಪಿಸಿ ತಾಲೂಕು ಆಡಳಿತ ಸೌಧದ ಆವರಣದಲ್ಲಿ ವಿವಿಧ ಗ್ರಾಮಗಳ ರೈತರು ಅಹೋರಾತ್ರಿ ಧರಣಿ ಆರಂಭಿಸಿದ್ದರು.
ಗುರುವಾರ ಮಧ್ಯರಾತ್ರಿ ತಹಸೀಲ್ದಾರ್ ರತ್ನಾಂಬಿಕಾ ಹಾಗೂ ಅಕ್ರಮ ಸಕ್ರಮ ಸಮಿತಿ ಸದಸ್ಯ ಬಿ.ಟಿ.ನರಸಿಂಹಮೂರ್ತಿ ಪ್ರತಿಭಟನೆ ಕೈಬಿಡುವಂತೆ ಪ್ರತಿಭಟನಾಕಾರರನ್ನು ಮನವೊಲಿಸಿ ವಿಫಲರಾಗಿದ್ದರು. ಶುಕ್ರವಾರ ರೈತರು ಪ್ರತಿಭಟನೆ ನಡೆಸುತ್ತಿರುವ ವಿಚಾರ ತಿಳಿದು ಶಾಸಕ ಅನಿಲ್ ಸ್ಥಳಕ್ಕೆ ಆಗಮಿಸಿ ಅ.29ರಂದು ಸಭೆ ಕರೆಯಲು ತೀರ್ಮಾನಿಸಲಾಗಿದೆ. ಸಭೆಯಲ್ಲಿ ಚರ್ಚೆ ಮಾಡಿ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದರು.
ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಈಗಾಗಲೇ ನಿಮ್ಮ ಅಧ್ಯಕ್ಷತೆಯಲ್ಲಿ ಹಲವು ಸಭೆಗಳನ್ನು ನಡೆಸಿದ್ದೀರಾ. ಕೆಲವರಿಗೆ ಸಾಗುವಳಿ ಪತ್ರ ನೀಡಿದ್ದೀರಾ. 30-40 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ನಮಗೆ ಹಕ್ಕುಪತ್ರ ನೀಡಿಲ್ಲ ಎಂದರೆ ಯಾವ ನ್ಯಾಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಶಾಸಕರು, ಜಿಲ್ಲೆಯಲ್ಲಿ ಯಾವ ತಾಲೂಕಿನಲ್ಲಿಯೂ ನೀಡದಷ್ಟು ಸಾಗುವಳಿ ಪತ್ರಗಳನ್ನು ನಮ್ಮ ತಾಲೂಕಿನಲ್ಲಿ ನೀಡಲಾಗಿದೆ. ಕಳೆದ ಸಭೆಯಲ್ಲಿ 202 ಸಾಗುವಳಿ ಮಂಜೂರಾತಿಗೆ ಅನುಮೋದನೆ ನೀಡಲಾಗಿದೆ. ಆದರೆ ತಹಸೀಲ್ದಾರ್ ಅವರು 86 ಜನರಿಗೆ ಮಾತ್ರ ಸಾಗುವಳಿ ಹಕ್ಕುಪತ್ರ ವಿತರಣೆ ಮಾಡಿ ಉಳಿಕೆ ರೈತರಿಗೆ ವಿತರಣೆ ಮಾಡದೆ ಸಮಿತಿ ನಿರ್ಧಾರಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಹಾಗಾಗಿ, ತಹಸೀಲ್ದಾರ್ ವಿರುದ್ಧ ಜಿಲ್ಲಾಧಿಕಾರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಇದರಿಂದ ತೃಪ್ತರಾದ ರೈತರು, ತಹಸೀಲ್ದಾರ್ ವಿರುದ್ಧ ಈಗ ಆರೋಪ ಮಾಡುವ ನೀವು, ಇದುವರೆಗೆ ಅವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ? ತಹಸೀಲ್ದಾರ್ ರಜೆ ಮೇಲೆ ತೆರಳಿದ್ದು, ಅ.29ಕ್ಕೆ ಹೇಗೆ ಸಭೆ ನಡೆಯುತ್ತದೆ ಎಂದು ಶಾಸಕರ ವಿರುದ್ಧ ತಿರುಗಿಬಿದ್ದರು.
ನಂತರ ಶಾಸಕರು 29ಕ್ಕೆ ಸಮಿತಿ ಸಭೆ ನಡೆಸಿ ಸಾಗುವಳಿ ಹಕ್ಕುಪತ್ರ ನೀಡಲು ಕ್ರಮ ವಹಿಸುತ್ತೇನೆ. ನನ್ನ ಮೇಲೆ ನಂಬಿಕೆ ಇದ್ದರೆ ಪ್ರತಿಭಟನೆ ಕೈಬಿಡಿ. ಇಲ್ಲವೇ ನಿಮಗಿಷ್ಟ ಬಂದಂತೆ ಮಾಡಿ ಎಂದು ತೆರಳಿದರು.
ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಶಾಸಕರ ವಿರುದ್ಧ ಘೋಷಣೆ ಕೂಗಿದರು. ನಂತರ ಶಾಸಕರು ತಹಸೀಲ್ದಾರ್ ಕಚೇರಿಯಿಂದ ಕೆಲಸದ ನಿಮಿತ್ತ ಹೊರಗೆ ತೆರಳಲು ಬಂದಾಗ ಪ್ರತಿಭಟನಾಕಾರರು ಅಡ್ಡಗಟ್ಟಿ ನಾವು ನಿಮ್ಮನ್ನು ಹೊರಗೆ ಹೋಗಲು ಬಿಡುವುದಿಲ್ಲ, ನಮಗೆ ಸಾಗುವಳಿ ಕೊಡುವುದಕ್ಕೆ ಕ್ರಮವಹಿಸಿದ ನಂತರ ಹೋಗಿ ಎಂದು ಶಾಸಕರನ್ನು ಮುಂದೆ ಹೋಗಲು ಬಿಡದೆ ಪ್ರತಿಭಟಿಸಿದರು.
ನಂತರ ಮುಖಂಡರ ಮನವೊಲಿಕೆಗೆ ವಾಪಸ್ ಬಂದ ಶಾಸಕರು, ಅ.29 ರಂದು ಯಾವುದೇ ಕಾರಣಕ್ಕೂ ಸಭೆ ರದ್ದು ಮಾಡುವ ಪ್ರಶ್ನೆಯೇ ಇಲ್ಲ. ಆ ದಿನ ಸಾಗುವಳಿಗೆ ಅರ್ಜಿ ಹಾಕಿರುವ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸುತ್ತೇನೆ ಎಂದು ಭರವಸೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಆಗಮಿಸಿ, ಶಾಸಕರು ಅ.29 ಕ್ಕೆ ಸಮಿತಿ ಸಭೆ ಕರೆದು ಸಮಸ್ಯೆ ಬಗೆಹರಿಸುತ್ತೇನೆಂದು ಭರವಸೆ ನೀಡಿರುವುದರಿಂದ ಪ್ರತಿಭಟನೆ ಕೈಬಿಡಬೇಕು. ಒಂದು ವೇಳೆ ಕ್ರಮವಹಿಸದೆ ಇದ್ದರೆ ನಿಮ್ಮ ಜತೆ ನಾನೂ ಕುಳಿತು ಪ್ರತಿಭಟನೆ ಮಾಡುತ್ತೇನೆ ಎಂದು ಮನವರಿಕೆ ಮಾಡಿದ ನಂತರ ಪ್ರತಿಭಟನಾಕಾರರು ತಾತ್ಕಾಲಿಕವಾಗಿ ಧರಣಿ ಕೈಬಿಟ್ಟರು.