ಚಿಕ್ಕಮಗಳೂರು ಎಡಿಸಿ ನಾರಾಯಣ ರಡ್ಡಿ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದ ಡಿಎಸ್‌ಎಸ್ ಮುಖಂಡರು ಕಂದಾಯ ಭೂಮಿಯನ್ನು ಒತ್ತುವರಿಗೊಳಿಸಿ ಸಾಗುವಳಿ ಮಾಡಿರುವ ಜಮೀನನ್ನು ಮಂಜೂರಾತಿ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಬಾಲಕೃಷ್ಣ ಬಿಳೇಕಲ್ಲು, ವಸಂತ್, ಗೀತಾ, ರಾಜೇಶ್ ಮತ್ತಿತರರಿದ್ದರು. 
ಜಿಲ್ಲೆ

ಸಾಗುವಳಿ ಜಮೀನನ್ನು ಮಂಜೂರು ಮಾಡಲು ಮನವಿ

ಚಿಕ್ಕಮಗಳೂರು: ಕಂದಾಯ ಭೂಮಿಯನ್ನು ಒತ್ತುವರಿಗೊಳಿಸಿ ಸಾಗುವಳಿ ಮಾಡಿರುವ ಜಮೀನನ್ನು ಮಂಜೂರಾತಿ ಮಾಡಿಕೊಡಬೇಕು ಎಂದು ಒತ್ತಾಯಿಸಿ ಡಿಎಸ್‌ಎಸ್ ಮುಖಂಡರು ಸೋಮವಾರ ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಬಾಲಕೃಷ್ಣ ಬಿಳೇಕಲ್ಲು, ಕಳಸ ಹೋಬಳಿಯ ತನುಡಿ ಗ್ರಾಮದ ಸ.ನಂ.೩೬ರಲ್ಲಿ ೩೪ ಕುಟುಂಬಗಳು ಸರ್ಕಾರಿ ಜಮೀನನ್ನು ಮೂರು ತಲೆಮಾರಿನಿಂದಲೂ ಕಾಫಿ, ಮೆಣಸು, ತೆಂಗು ಹಾಗೂ ಬಾಳೆ ಬೆಳೆಗಳನ್ನು ಸಾಗುವಳಿ ಮಾಡಿಕೊಂಡು ಜೀವನ ಸುಧಾರಣೆಗೆ ಬಳಸಿಕೊಂಡಿದ್ದಾರೆ ಎಂದರು.

ಸ್ವಾಧೀನಾನುಭವದಲ್ಲಿರುವ ಜಮೀನು ಮಂಜೂರಾತಿ ಕೋರಿ ಹಿಂದೆ ನಮೂನೆ ನಂ.೫೦, ೫೩ರಲ್ಲಿ ಅರ್ಜಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಭೂ ಮಂಜೂರಾತಿ, ಹಕ್ಕುಪತ್ರ, ಸಾಗುವಳಿ ಚೀಟಿ ನೀಡಿರುವುದಿಲ್ಲ. ಈ ಕುಟುಂಬಗಳು ವಾಸದ ಮನೆ ನಿರ್ಮಿಸಿಕೊಂಡು ಸಂಸಾರ ನಡೆಸುತ್ತಿದ್ದು, ಈ ಜಮೀನು ಹೊರತಾಗಿ ಯಾವುದೇ ಆಸ್ತಿ ಇರುವುದಿಲ್ಲ ಎಂದು ಹೇಳಿದರು.

ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ೮೦೦ ಎಕರೆ ಪ್ರದೇಶವನ್ನು ಹಸ್ತಾಂತರಿಸಿದೆ. ಆ ಪ್ರದೇಶದ ಕುಟುಂಬಗಳಿಗೆ ಜಮೀನನ್ನು ವಿಲೇವಾರಿ ಮಾಡಿರುತ್ತಾರೆ. ಆದರೆ ಗೋಮಾಳ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡಿರುವ ಕೃಷಿ ಜಮೀನಿಗೆ ಅರ್ಜಿ ಸಲ್ಲಿಸಿದ್ದು ಇದುವರೆಗೂ ಮಂಜೂರಾತಿ ದೊರೆತಿಲ್ಲ ಎಂದು ತಿಳಿಸಿದರು.

೧೯೯೮ ಹಾಗೂ ೨೦೦೦ನೇ ಇಸವಿಯಲ್ಲಿ ಪುನಃ ಅರ್ಜಿಯನ್ನು ಸಲ್ಲಿಸಿದರೂ ಪರಿಗಣೆಗೆ ತಗೆದುಕೊಳ್ಳದೇ ೨೦೦೧ರಲ್ಲಿ ಮತ್ತೆ ಅರಣ್ಯ ಪ್ರದೇಶ ಎಂದು ಘೋಷಣೆೆ ಮಾಡಿರುತ್ತಾರೆ. ಹೀಗಾಗಿ ಸ್ವಾಧೀನ ಮತ್ತು ಸಾಗು ವಳಿ ಅನುಭವದಲ್ಲಿರುವ ಜಾಗವನ್ನು ಮಂಜೂರಾತಿದಾರರ ಹೆಸರಿಗೆ ಖಾತೆ ಮಾಡುವ ಮೂಲಕ ಮುಂದಿನ ವ್ಯವಹಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಡಿಎಸ್‌ಎಸ್ ಕಳಸ ತಾಲೂಕು ಸಂಚಾಲಕ ವಸಂತ್, ಮುಖಂಡರಾದ ಪ್ರಸಾದ್, ಗೀತಾ, ರಾಜೇಶ್ ಮತ್ತಿತರರಿದ್ದರು.