ಸಾಗರ: ವರ್ಷಕ್ಕಿಂತ ಹೆಚ್ಚಿನ ಬೆಂಬಲ ಬೆಲೆ ನಿಗದಿಪಡಿಸಲಾಗಿದ್ದು, ರೈತರು ಖರೀದಿ ಕೇಂದ್ರದಲ್ಲೇ ಭತ್ತ ಮಾರಾಟ ಮಾಡಬೇಕು ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
ಸಾಗರದ ಎಪಿಎಂಸಿ ಪ್ರಾಂಗಣದ ರೈತ ಭವನದಲ್ಲಿ ಮಂಗಳವಾರ ರಾಜ್ಯ ಸಹಕಾರ ಮಾರಾಟ ಮಂಡಳ ಮತ್ತು ಆಹಾರ ನಾಗರಿಕ ಸರಬರಾಜು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಸಾಗರ-ಹೊಸನಗರ ತಾಲೂಕು ವ್ಯಾಪ್ತಿಯ ಭತ್ತ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾ.31ರ ವರೆಗೆ ಖರೀದಿ ಕೇಂದ್ರದಲ್ಲಿ ಭತ್ತವನ್ನು ಖರೀದಿ ಮಾಡಲಾಗುವುದು ಎಂದು ಹೇಳಿದರು.
ಭತ್ತ ಖರೀದಿ ಕೇಂದ್ರಕ್ಕೆ ಕಳೆದ ವರ್ಷದ ಒಂದಷ್ಟು ಹಣ ಬಿಡುಗಡೆಯಾಗಿಲ್ಲ ಎನ್ನುವ ದೂರುಗಳು ರೈತ ವಲಯದಲ್ಲಿದೆ. ಸರ್ಕಾರದ ಜತೆ, ಸಂಬಂಧಪಟ್ಟ ಸಚಿವರ ಜತೆ ಮಾತುಕತೆ ನಡೆಸಿ ಹಣ ಬಿಡುಗಡೆಗೆ ಪ್ರಯತ್ನ ನಡೆಸಲಾಗುತ್ತದೆ ಎಂದು ತಿಳಿಸಿದರು.
ಕೆಲ ಜಿಲ್ಲೆಗಳಲ್ಲಿ ಭತ್ತಕ್ಕೆ ಕ್ವಿಂಟಾಲ್‌ಗೆ 500 ರೂ. ಸಹಾಯಧನ ನೀಡಲಾಗುತ್ತಿದೆ ಎನ್ನುವ ಮಾಹಿತಿ ಇದೆ. ನಮ್ಮ ತಾಲೂಕಿನ ರೈತರಿಗೂ ಸೌಲಭ್ಯ ಸಿಗುವಂತೆ ಮಾಡುತ್ತೇವೆ.ಅಧಿಕಾರಿಗಳು ರೈತರಿಗೆ ಕಾಲಕಾಲಕ್ಕೆ ಸೂಕ್ತ ಮಾಹಿತಿಯನ್ನು ನೀಡಿ, ಖರೀದಿ ಕೇಂದ್ರಕ್ಕೆ ರೈತರು ಬರುವಂತೆ ಮಾಡಬೇಕು ಎಂದರು.