ಜಿಲ್ಲೆ

ಸಾಗರ ಯೋಜನಾ ಪ್ರಾಧಿಕಾರ ಕಚೇರಿ ಉದ್ಘಾಟನೆ

ಸಾಗರ: ಸುಂದರ ಸಾಗರ ಕಟ್ಟುವ ಉದ್ದೇಶದಿಂದ ಯೋಜನಾ ಪ್ರಾಧಿಕಾರ ರಚನೆ ಮಾಡಲಾಗಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ನಗರಸಭೆಯಲ್ಲಿ ಸೋಮವಾರ ಸಾಗರ ಯೋಜನಾ ಪ್ರಾಧಿಕಾರದ ಕಚೇರಿ ಉದ್ಘಾಟಿಸಿ ಮಾತನಾಡಿ, ಸಾಗರ ನಗರಸಭೆಗೆ ವಾರ್ಷಿಕ 4 ಕೋಟಿ ರೂ.ಗೂ ಹೆಚ್ಚಿನ ಆದಾಯ ಬರುತ್ತಿದೆ. ಬರುವ ಹಣವನ್ನು ನಗರದ ಅಭಿವೃದ್ಧಿಗೆ ಸದುಪಯೋಗ ಪಡಿಸಿಕೊಳ್ಳಲು ಪ್ರಾಧಿಕಾರ ಅಗತ್ಯ ಎಂದರು.

ಯೋಜನಾ ಪ್ರಾಧಿಕಾರ ರಚನೆ ಮಾಡಬೇಕೆಂಬ ಮನವಿಗೆ ಸ್ಪಂದನೆ ಸಿಕ್ಕಿದೆ. ಸಾಮಾಜಿಕ ಕಾರ್ಯಕರ್ತ ನಾಗರಾಜ್ ಪೈ ಅವರನ್ನು ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿದೆ. ಶೀಘ್ರವೇ ನಗರದ ಪ್ರಮುಖರ ಸಭೆ ಕರೆದು ಮುಂದಿನ ಕಾರ್ಯಯೋಜನೆ ರೂಪಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಊರನ್ನು ವ್ಯವಸ್ಥಿತವಾಗಿ ಕಟ್ಟಲು ಹಿಂದಿನವರು ಆಸಕ್ತಿ ವಹಿಸಿಲ್ಲ. ಹೊಸದಾಗಿ ಅಸ್ತಿತ್ವಕ್ಕೆ ಬಂದ ಪ್ರಾಧಿಕಾರ ಒಂದು ವರ್ಷದ ಯೋಜನೆ ಜತೆಗೆ ಐದು ವರ್ಷದ ಸುದೀರ್ಘ ಯೋಜನೆಯನ್ನು ರೂಪಿಸಬೇಕು. ಈಗಾಗಲೇ ಮಾರ್ಕೆಟ್ ರಸ್ತೆ, ಬಿ.ಎಚ್.ರಸ್ತೆ ಸೇರಿದಂತೆ ನಗರ ಸಂಪರ್ಕಿಸುವ ಐದು ರಸ್ತೆಗಳನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಸಾಗರ ನಗರವನ್ನು ಮಾದರಿಯಾಗಿ ರೂಪಿಸುವ ನಿಟ್ಟಿನಲ್ಲಿ ನಗರ ಯೋಜನಾ ಪ್ರಾಧಿಕಾರದ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ. ಊರಿನ ಅಭಿವೃದ್ಧಿಯ ಸಂದರ್ಭದಲ್ಲಿ ರಾಜಕೀಯ ಆಲೋಚನೆ ಮಾಡುವುದು ಬೇಡ. ಎಲ್ಲರೂ ಒಟ್ಟಾಗಿ ಅಭಿವೃದ್ಧಿಯ ಕೆಲಸ ಮಾಡೋಣ ಎಂದು ಹೇಳಿದರು.