ಜಿಲ್ಲೆ

ಸಾಗರ ಮಾರಿಕಾಂಬೆ ಜಾತ್ರೆಯಲ್ಲಿ ದಾಸೋಹದ ವೈಭವ; ನಿತ್ಯ 10 ಸಾವಿರಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆ

ಸಾಗರ: ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬಾ ಜಾತ್ರೆಯು ವೈಭವದಿಂದ ಸಾಗಿದ್ದು ನಿತ್ಯ ಸಾವಿರಾರು ಭಕ್ತರು ದೇವಿ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಹೀಗೆ ಅಮ್ಮನವರ ದರ್ಶನಕ್ಕೆ ಆಗಮಿಸುವ ಭಕ್ತರಿಗಾಗಿ ಪ್ರತಿದಿನ ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿಯಿಂದ ನಿರಂತರ ಅನ್ನ ಸಂತರ್ಪಣೆ ನಡೆಯುತ್ತಿದೆ.

ವೀರಶೈವ ಕಲ್ಯಾಣ ಮಂದಿರದಲ್ಲಿ ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿದೆ. ನಿತ್ಯ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಸೇರಿದಂತೆ ಒಟ್ಟಾರೆ 8ರಿಂದ 10 ಸಾವಿರಕ್ಕೂ ಅಧಿಕ ಜನರು ಅನ್ನ ಸಂತರ್ಪಣೆಯಲ್ಲಿ ತಿಂಡಿ, ಊಟ ಮಾಡುತ್ತಿದ್ದಾರೆ.

ಮಾರಿಕಾಂಬಾ ಜಾತ್ರಾ ಸಮಿತಿಯಿಂದ ದಾಸೋಹ ಸಮಿತಿ ರಚಿಸಿದು, ಸಂಚಾಲಕ ವಿನಾಯಕ್ ಗುಡಿಗಾರ್, ಸಹ ಸಂಚಾಲಕ ನಿತ್ಯಾನಂದ ಶೆಟ್ಟಿ, ಭಾಸ್ಕರ್ ಆಚಾರ್ ಸೇರಿದಂತೆ 15-20 ಜನರ ತಂಡ ಅನ್ನ ದಾಸೋಹದಲ್ಲಿ ತೊಡಗಿಸಿಕೊಂಡಿದೆ. ಪ್ರತಿದಿನವು ವೈವಿಧ್ಯ ತಿಂಡಿ, ಸಿಹಿ ತಿನಿಸುಗಳನ್ನು ವಿತರಿಸಲಾಗುತ್ತಿದೆ. ಬೆಳಗ್ಗೆ ತಿಂಡಿ ವೇಳೆ ಕೇಸರಿಬಾತ್, ಉಪ್ಪಿಟ್ಟು, ಪಲಾವ್, ಚಿತ್ರಾನ್ನ, ಪುಳಿಯೋಗರೆ, ಅವಲಕ್ಕಿ ಜತೆಗೆ ಟೀ, ಕಾಫಿ ವಿತರಿಸಲಾಗುತ್ತಿದೆ. ಮಧ್ಯಾಹ್ನ ಹಾಗೂ ರಾತ್ರಿ ನಡೆಯುವ ಊಟದ ವ್ಯವಸ್ಥೆಯಲ್ಲಿ ಪಲ್ಯ, ಅನ್ನ, ಸಾಂಬರ್, ಮಜ್ಜಿಗೆ, ಉಪ್ಪಿನಕಾಯಿ ನೀಡಲಾಗುತ್ತಿದೆ. ಊಟದ ಜತೆಗೆ ಕೇಸರಿಬಾತ್, ಪಾಯಸ, ಗೋಧಿ ಪಾಯಸ, ಮೈಸೂರು ಪಾಕ್, ಹೋಳಿಗೆ ಹೀಗೆ ದಿನಕ್ಕೊಂದು ಸಿಹಿ ಬಡಿಸಲಾಗುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿದೆ. ಜಾತ್ರೆಯಲ್ಲಿ ದಿನಪೂರ್ತಿ ನಿಂತು ಕೆಲಸ ಮಾಡುವ ಪೊಲೀಸ್, ಹೋಂಗಾರ್ಡ್ ಸಿಬ್ಬಂದಿಗೆ ಕುಳಿತು ಊಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.

ಸಾಗರದ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಶನಿವಾರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಡಾ. ರಾಜನಂದಿನಿ ಕಾಗೋಡು ಪಾಲ್ಗೊಂಡು ಭಕ್ತಾದಿಗಳಿಗೆ ಊಟ ಬಡಿಸಿದರು.

ಸ್ನೇಹಿತರಿಂದಲೂ ಭೋಜನ:

ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಮಾರಿಕಾಂಬೆ ಜಾತ್ರೆಯ ಪ್ರಯುಕ್ತ ನಗರಸಭೆ ಸಂಕೀರ್ಣದಲ್ಲಿ ಸ್ನೇಹಿತರು ಸಾಗರ ಸಂಸ್ಥೆ ವತಿಯಿಂದಲೂ ಪ್ರತಿದಿನ ಮಧ್ಯಾಹ್ನ ಉಚಿತವಾಗಿ ಊಟ ವಿತರಿಸಲಾಗುತ್ತಿದೆ. ಕಳೆದ 12 ಜಾತ್ರೆಗಳಿಂದಲೂ ಇವರು ಸಾರ್ವಜನಿಕರಿಗೆ ಊಟ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಸಾವಿರಾರು ಜನರು ನಿತ್ಯ ದಾಸೋಹದಲ್ಲಿ ಪಾಲ್ಗೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ.