ಜಿಲ್ಲೆ

ಸಾಗರ: ಗಣಪತಿ ಕೆರೆಹಬ್ಬ ನಿಮಿತ್ತ ಸ್ವಚ್ಛತಾ ಅಭಿಯಾನ

Shivamogga

ಸಾಗರ: ಕೆರೆ ಹಬ್ಬದ ಮೂಲಕ ಜಲಮೂಲ ಸಂರಕ್ಷಣೆ ಮತ್ತು ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ಗಣಪತಿ ಕೆರೆ ಅಂಗಳದಲ್ಲಿ ಶನಿವಾರ ಕೆರೆ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕೆರೆ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗಣಪತಿ ಕೆರೆಗೆ ಬಹಳಷ್ಟು ಇತಿಹಾಸವಿದೆ. ಇತ್ತೀಚೆಗೆ ಈ ನೀರು ಮುಟ್ಟಲೂ ಯೋಗ್ಯವಲ್ಲದಷ್ಟು ಕೊಳಕಾಗಿತ್ತು. ಅಸಹ್ಯದ ವಾತಾವರಣ ನಿರ್ಮಾಣವಾಗಿತ್ತು. ಗಣಪತಿ ಕೆರೆಯ ಸೌಂದರ್ಯ ಹೆಚ್ಚಿಸಲು ಜಲಮೂಲ ಸಂರಕ್ಷಣೆ, ಹೂಳು ತೆಗೆಯುವುದು, ಕೆರೆ ಸುತ್ತ ಅಭಿವೃದ್ಧಿ ಮಾಡಲಾಗುತ್ತಿದೆ. ಎರಡು ದಿನದ ಕೆರೆ ಸ್ವಚ್ಛತೆ ಕೆಲಸ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ಸಾರ್ವಜನಿಕ ಕೆಲಸಗಳಲ್ಲಿ ಜಾಗೃತಿ ಮೂಡಿಸುವುದು ಒಂದು ದಿನದಲ್ಲಿ ಆಗುವ ಕೆಲಸವಲ್ಲ, ನಿರಂತರವಾಗಿ ತೊಡಗಿಕೊಳ್ಳಬೇಕು. ಯಾವುದೇ ಕೆಲಸದಲ್ಲಿ ಮೊದಲು ನಿಷ್ಠೆ ಇರಬೇಕು ಎಂದು ಹೇಳಿದರು. ಇಲ್ಲಿನ ಜನ ಸಂಸ್ಕೃತಿವಂತರು. ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕೆರೆ ಅಭಿವೃದ್ಧಿಗಾಗಿ ನಾಲ್ಕು ವರ್ಷದಿಂದ ಪ್ರಯತ್ನಿಸುತ್ತಿದ್ದು ಬಹುಬೇಗನೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಕೆರೆ ಹಬ್ಬದ ಹೆಸರಿನಲ್ಲಿ ನಾವಿಲ್ಲಿ ಮೋಜು ಮಸ್ತಿ ಮಾಡುತ್ತಿಲ್ಲ. ಜಲಮೂಲ ಸಂರಕ್ಷಣೆ ಭಾಷಣದಿಂದ ಸಾಧ್ಯವಿಲ್ಲ. ಅದಕ್ಕಾಗಿ ಎಲ್ಲರೂ ತೊಡಗಿಸಿಕೊಳ್ಳಬೇಕು. ಕೆರೆ ಮತ್ತು ಜಲಮೂಲಗಳನ್ನು ಉಳಿಸಿಕೊಳ್ಳುವಲ್ಲಿ ಸರ್ಕಾರ ಹೆಚ್ಚಿನ ಸಹಕಾರ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಆನಂದಪುರ ಮತ್ತು ಲಿಂಗದಹಳ್ಳಿ ಕೆರೆ ಅಭಿವೃದ್ಧಿ ಬಗ್ಗೆ ಗಮನ ಹರಿಸುತ್ತೇನೆ ಎಂದು ಹೇಳಿದರು.