ಜಿಲ್ಲೆ

ಸಾಗರ ಕ್ಷೇತ್ರದಲ್ಲಿ 50 ಸಾವಿರ ರಾಷ್ಟ್ರಧ್ವಜ ವಿತರಣೆ ; ಮನೆ ಮನೆಯಲ್ಲೂ ತಿರಂಗಾ ಹಾರಾಟಕ್ಕೆ ಸಿದ್ಧತೆ

ಸಾಗರ: ಸ್ವಾತಂತ್ರೃದ ಅಮೃತ ಮಹೋತ್ಸವದ ಅಂಗವಾಗಿ ಆ.13ರಿಂದ 15ರವರೆಗೆ ಪ್ರತಿ ಮನೆ ಮೇಲೂ ರಾಷ್ಟ್ರಧ್ವಜ ಹಾರಿಸಲಾಗುವುದು. ಸಾಗರ ವಿಧಾನಸಭಾ ವ್ಯಾಪ್ತಿಯಲ್ಲಿ 50 ಸಾವಿರ ರಾಷ್ಟ್ರಧ್ವಜವನ್ನು ಉಚಿತವಾಗಿ ವಿತರಣೆ ಮಾಡಲಾಗುವುದು ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದರು.

ರಾಷ್ಟ್ರಧ್ವಜ ಕಸೂತಿ ಮಾಡುವ, ಧ್ವಜ ಕಟ್ಟಲು ತಯಾರಿ ಮಾಡುವ ಕಾರ್ಯಕ್ಕೆ ಗಾಂಧಿ ಮೈದಾನದಲ್ಲಿ ಭಾನುವಾರ ಚಾಲನೆ ನೀಡಿ ಮಾತನಾಡಿ, ತಾಲೂಕು ಆಡಳಿತ ಹಾಗೂ ನಗರಸಭೆಯಿಂದ ಪ್ರತಿ ಮನೆಗೂ ಉಚಿತವಾಗಿ ರಾಷ್ಟ್ರಧ್ವಜ ವಿತರಿಸಲಾಗುವುದು. ಪ್ರಧಾಣಿ ಆಶಯದಂತೆ ಸ್ವಾತಂತ್ರೃದ ಅಮೃತ ಮಹೋತ್ಸವವನ್ನು ನೆನಪಿನಲ್ಲಿ ಉಳಿಯುವಂತೆ ಆಚರಣೆ ಮಾಡಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ. ರಾಷ್ಟ್ರಧ್ವಜ ಭಾರತೀಯರ ಸ್ವಾಭಿಮಾನದ ಸಂಕೇತ. 3 ದಿನ ನಮ್ಮ ಮನೆಯ ಮೇಲೆ ಹಾರಾಡುತ್ತಿದ್ದರೆ ನಾವು ಪುನೀತರಾಗುವ ಜತೆಗೆ ರಾಷ್ಟ್ರಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಂತೆ ಆಗುತ್ತದೆ. ರಾಜ್ಯದಲ್ಲಿಯೇ ನಮ್ಮ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ಅತ್ಯಂತ ಮಾದರಿಯಾಗುವಲ್ಲಿ ಎಲ್ಲರೂ ಶ್ರಮಿಸೋಣ ಎಂದರು.

ಸಾಗರ ವಿಧಾನಸಭಾ ವ್ಯಾಪ್ತಿಯಲ್ಲಿ ಒಟ್ಟು 50 ಸಾವಿರ ರಾಷ್ಟ್ರಧ್ವಜವನ್ನು ಮನೆಗಳಿಗೂ ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ಇಂದು ಅಧಿಕೃತವಾಗಿ ಧ್ವಜ ತಯಾರಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ನಾವು ನೀಡಿದ ರಾಷ್ಟ್ರಧ್ವಜ ಮನೆಯ ಮೇಲೆ ಹಾರಿಸಲು ಅವಕಾಶವಾಗುವಂತೆ ಎಲ್ಲ ರೀತಿಯ ಸಿದ್ಧತೆ ಮಾಡಿ ವಿತರಣೆ ಮಾಡಲಾಗುತ್ತಿದೆ. ಬದಲಾದ ದಿನಗಳಲ್ಲಿ ಮಕ್ಕಳಿಗೆ ರಾಷ್ಟ್ರಧ್ವಜದ ಮಹತ್ವ ಅರ್ಥವಾಗುತ್ತಿಲ್ಲ. ಇಂತಹ ಕಾರ್ಯಕ್ರಮಗಳ ಮೂಲಕ ಮುಂದಿನ ಪೀಳಿಗೆ ರಾಷ್ಟ್ರ, ರಾಷ್ಟ್ರಧ್ವಜದ, ಭಾರತೀಯತೆ ಮಹತ್ವ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್ ಇತರರಿದ್ದರು.