ಚಾಮರಾಜನಗರ: ಹುಲಿ ಹತ್ಯೆ ಪ್ರಕರಣದಲ್ಲಿ ಮೃತದೇಹವನ್ನು ಭೀಕರವಾಗಿ ಮೂರು ತುಂಡು ಮಾಡಲು ಕಾರಣವೇನು ಗೊತ್ತಾ..?
ಮಲೆ ಮಹದೇಶ್ವರ ವನ್ಯಜೀವಿಧಾಮದ ಹನೂರು ಬರ್ ವಲಯದ ಪಚ್ಚೆದೊಡ್ಡಿ ಅರಣ್ಯದಲ್ಲಿ ಅ.3ರಂದು ಬೆಳಕಿಗೆ ಬಂದ 13 ವರ್ಷದ ಗಂಡು ಹುಲಿ ಹತ್ಯೆ ಪ್ರಕರಣದ ತನಿಖೆಯಲ್ಲಿ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ 7 ಆರೋಪಿಗಳಲ್ಲಿ ಸಿಕ್ಕಿಬಿದ್ದಿರುವ ಪಚ್ಚೆದೊಡ್ಡಿ ಗ್ರಾಮದ ಪಚ್ಚಮಲ್ಲು ಆಲಿಯಾಸ್ ಸಣ್ಣ, ಗಣೇಶ್ ಹಾಗೂ ಕಾಂಚಳ್ಳಿ ಗ್ರಾಮದ ಸಂಪಿಗೆ ಮಾದೇವ ಆಲಿಯಾಸ್ ಸಂಪು ವಿಚಾರಣೆ ವೇಳೆ ಅರಣ್ಯಾಧಿಕಾರಿಗಳಿಗೆ ಹುಲಿಯ ಬೀಭತ್ಸೃ ಕೊಲೆಗೆ ಕಾರಣ ಗೊತ್ತಾಗಿದೆ.
ಮಾನವರ ಹತ್ಯೆಯಲ್ಲಿ ಮೃತದೇಹವನ್ನು ತುಂಡು ತುಂಡು ಮಾಡಲು ಕಾರಣವಾಗಿರುವ ಉದ್ದೇಶದಂತೆಯೇ ಹುಲಿ ಹತ್ಯೆ ಪ್ರಕರಣದಲ್ಲೂ ಮೃತದೇಹದ ವಿಲೇವಾರಿ ಸುಗಮಗೊಳಿಸಲು ಮತ್ತು ಸಾಕ್ಷ್ಯ ನಾಶ ಪಡಿಸುವ ಉದ್ದೇಶ ಅಡಗಿರುವುದು ಗೊತ್ತಾಗಿದೆ.
ಮೂರು ತುಂಡು ಮಾಡಿದರು:
ಆರೋಪಿ ಚಂದು ಸಾಕಿದ್ದ ಹಸುವಿನ ಮೇಲೆ ಹುಲಿ ದಾಳಿ ಮಾಡಿತ್ತು. ಇದಕ್ಕೆ ಪ್ರತೀಕಾರ ತಿರಿಸಿಕೊಳ್ಳಲು ಹಸು ಕಳೇಬರದ ಮೇಲೆ ವಿಷ ಹಾಕಲಾಯಿತು. ಇದನ್ನು ತಿಂದ ಹುಲಿ ಮೃತಪಟ್ಟಿತು. ಈ ವಿಷಯ ತಿಳಿದ ಆರೋಪಿಗಳು ಸ್ಥಳಕ್ಕೆ ಬಂದು ಹುಲಿ ಸತ್ತಿರುವ ಸಾಕ್ಷ್ಯ ನಾಶ ಪಡಿಸಲು ಹುಲಿಯ ದೇಹವನ್ನು ಮೂರು ಭಾಗ ಮಾಡಿದ್ದಾರೆ. ತಲೆ ಮತ್ತು ಮುಂಗಾಲುಗಳಿದ್ದ ಭಾಗವನ್ನು ಒಂದೆಡೆ ಹೂತು ಹಾಕಿದ್ದಾರೆ. ಹಿಂಭಾಗದ ಕಾಲು ಮತ್ತು ಬಾಲ ಇದ್ದ ಭಾಗವನ್ನು ಮತ್ತೊಂದೆಡೆ ಹಾಕಿ ಸೊಪ್ಪು ಮುಚ್ಚಿದ್ದಾರೆ. ಹೊಟ್ಟೆ ಭಾಗವನ್ನು ಇನ್ನೊಂದು ಕಡೆ ಹಾಕಿದ್ದರು ಎಂದು ತಿಳಿದುಬಂದಿದೆ.
ಕರುಳು, ಲಿವರ್ ಹೊರತೆಗೆದು..:
ಹುಲಿಯನ್ನು ವಿಷ ಹಾಕಿ ಕೊಂದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗುವ ಹಿನ್ನೆಲೆಯಲ್ಲಿ ಅದರ ಕರುಳು, ಲಿವರ್ ಅನ್ನು ಹೊರತೆಗೆದು ಬೇರೆಡೆ ಎಸೆಯಲಾಗಿತ್ತು ಎಂದು ಗೊತ್ತಾಗಿದೆ. ಆದರೆ ಪ್ರಕರಣ ಬೆಳಕಿಗೆ ಬಂದ ಮೇಲೆ ಆರೋಪಿಗಳು ತುಂಡು ಮಾಡಿ ಎಸೆದಿದ್ದ ಹುಲಿಯ ಎಲ್ಲ ಭಾಗಗಳು ಸಿಕ್ಕವು.
ಸರಹದ್ದು ಸ್ಥಾಪಿಸಿದ್ದ ಹುಲಿ:
ಮೃತ ಹುಲಿ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ತನ್ನ ಸರಹದ್ದು ಸ್ಥಾಪಿಸಿಕೊಂಡಿತ್ತು. ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 2003ರಲ್ಲಿ ಬಿಆರ್‌ಟಿ ಅರಣ್ಯದಲ್ಲಿ ಕಂಡಿದ್ದ ಈ ಹುಲಿ 2023ರಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲೂ ಕಾಣಿಸಿಕೊಂಡಿತ್ತು. ನಂತರ ಇಲ್ಲಿನ ಪಿ.ಜಿ.ಪಾಳ್ಯ ಮತ್ತು ಸುತ್ತಮುತ್ತಲಿನ ಅರಣ್ಯದಲ್ಲಿ ವಾಸ ಮಾಡುತ್ತಿತ್ತು ಎಂದು ತಿಳಿದುಬಂದಿದೆ.
ಕಳೇಬರವೇ ಸಿಗದಿದ್ದರೆ?:
ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಐದು ಹುಲಿಗಳು ವಿಷ ಪ್ರಾಶನದಿಂದ ಮೃತಪಟ್ಟವು. ಈ ಪ್ರಕರಣದಲ್ಲಿ ಹುಲಿಗಳ ಕಳೇಬರ ಪತ್ತೆಯಾಗಿದ್ದಕ್ಕೆ ಪ್ರಕರಣ ಬೆಳಕಿಗೆ ಬಂದಿತು. ಈ ರೀತಿ ಗೊತ್ತಾಗಿ ಸಿಕ್ಕಿ ಬೀಳಬಾರದೆಂಬ ಉದ್ದೇಶದಿಂದ ಪಚ್ಚೆದೊಡ್ಡಿಯಲ್ಲಿ ಹುಲಿ ದೇಹವನ್ನು ತುಂಡು ಮಾಡಿರುವ ಸಾಧ್ಯತೆ ಹೆಚ್ಚಿದೆ.
ಕಿಂಗ್‌ಪಿನ್ ಗೋವಿಂದ: ಹುಲಿ ಹತ್ಯೆ ಪ್ರಕರಣದಲ್ಲಿ ಗಂಗನದೊಡ್ಡಿಯ ಗೋವಿಂದ ಕಿಂಗ್‌ಪಿನ್ ಎಂದು ಅರಣ್ಯಾಧಿಕಾರಿಗಳು ಹೇಳುತ್ತಿದ್ದಾರೆ. ಪ್ರಕರಣದಲ್ಲಿ ಒಟ್ಟು 7 ಜನ ಆರೋಪಿಗಳಿದ್ದಾರೆ. ಇವರಲ್ಲಿ ಪಚ್ಚೆದೊಡ್ಡಿ ಗ್ರಾಮದ ಪಚ್ಚಮಲ್ಲು ಆಲಿಯಾಸ್ ಸಣ್ಣ, ಗಣೇಶ್ ಹಾಗೂ ಕಾಂಚಳ್ಳಿ ಗ್ರಾಮದ ಸಂಪಿಗೆ ಮಾದೇವ ಆಲಿಯಾಸ್ ಸಂಪು ಬಂಧಿತರಾಗಿದ್ದಾರೆ. ಪಚ್ಚೆದೊಡ್ಡಿಯ ಸಿದ್ದು ಬುಧವಾರ ಶರಣಾಗಿದ್ದಾನೆ. ಉಳಿದ ಆರೋಪಿಗಳಾದ ಗಂಗನದೊಡ್ಡಿ ಗೋವಿಂದ, ಕಾಂಚಳ್ಳಿ ಚಂದು, ಅಭಿಷೇಕ್ ಇನ್ನೂ ಸಿಕ್ಕಿಲ್ಲ. ಇವರಲ್ಲಿ ಗೋವಿಂದ ಬೇರೆ ಪ್ರಕರಣಗಳಲ್ಲೂ ಇದ್ದಾನೆ ಎಂದು ಹೇಳಲಾಗುತ್ತಿದೆ.
ಸಾಕ್ಷ್ಯ ನಾಶ ಪಡಿಸುವ ಉದ್ದೇಶದಿಂದ ಆರೋಪಿಗಳು ಹುಲಿಯನ್ನು ತುಂಡು ಮಾಡಿ ಭೂಮಿಯಲ್ಲಿ ಹೂತು ಹಾಕಲು ಪ್ರಯತ್ನ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ. ಭಾಸ್ಕರ್, ಡಿಸಿಎ್, ಮಲೆ ಮಹದೇಶ್ವರ ವನ್ಯಜೀವಿಧಾಮ