ಸಂಶಿ: ಪ್ರಾಣಿಗಳನ್ನು ಹೀನಾಯವಾಗಿ ಕಂಡು ಅನಗತ್ಯವಾಗಿ ಹಿಂಸಿಸುವ ಅದೆಷ್ಟೋ ಜನರ ಮಧ್ಯ ಸಾಕು ನಾಯಿಗೆ ಸೀಮಂತ ಮಾಡುವ ಮೂಲಕ ಇಲ್ಲೊಬ್ಬರು ಮಾದರಿಯಾಗಿದ್ದಾರೆ.
ಜಾತಿ ನಾಯಿಗಳನ್ನು ಸಾಕುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ಶ್ವಾನಕ್ಕೆ ಬೇಕಾದ ವಿಶೇಷ ಆಹಾರ ನೀಡಿ ಅದನ್ನು ಮನೆಯ ಸದಸ್ಯನಂತೆ ಕಾಣುವವರಿದ್ದಾರೆ. ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ನಾಡರ ಬಯಲು ಓಣಿಯ ನಿವಾಸಿ, ಸಾರಿಗೆ ನೌಕರ ರಮೇಶ ಪಡತೇರ ಎಂಬುವವರ ಮನೆಯಲ್ಲಿ ಸಾಕು ನಾಯಿ ಲೂಸಿಗೆ ಸೋಮವಾರ ರಾತ್ರಿ ಸೀಮಂತ ಮಾಡಿದ್ದು ಮತ್ತಷ್ಟು ವಿಶೇಷ.
ಹೆಣ್ಣುಮಕ್ಕಳಿಗೆ ಸಂಪ್ರದಾಯದಂತೆ ಹೇಗೆಲ್ಲ ಸೀಮಂತ ಕಾರ್ಯ ಮಾಡುತ್ತಾರೋ ಅದೇ ರೀತಿಯಲ್ಲಿ ಸಾಕು ಸಾಯಿ ಲೂಸಿಗೆ ಕುಟುಂಬಸ್ಥರೆಲ್ಲ ಸೇರಿ ಸಂಭ್ರಮದಿಂದ ಸೀಮಂತ ಕಾರ್ಯ ಮಾಡಿದ್ದಾರೆ. ಕೆಲ ತಿಂಗಳ ಹಿಂದೆ 10 ಸಾವಿರ ರೂಪಾಯಿ ಕೊಟ್ಟು ಲ್ಯಾಬ್ ತಳಿಯ ಶ್ವಾನ ಖರೀದಿಸಿ ಮನೆಗೆ ತಂದಿದ್ದರು. ಪ್ರೀತಿಯಿಂದ ಅದನ್ನು ಜತನ ಮಾಡಿದ್ದಾರೆ. ಸೀಮಂತ ಕಾರ್ಯದಲ್ಲಿ ಬಗೆಬಗೆಯ ತಿನಿಸು, ಹಣ್ಣುಗಳನ್ನು ಇರಿಸಲಾಗಿತ್ತು. ಜತೆಗೆ ಅರಿಶಿನ-ಕುಂಕುಮ, ಹಸಿರು ಬಳೆಗಳು, ತಾಂಬೂಲ ಇಟ್ಟು ಉಡಿ ತುಂಬಿದ್ದಾರೆ.
ಲೂಸಿಗೆ ಸೀರೆ ಉಡಿಸಿ, ಹೂಮಾಲೆ ಹಾಕಿ ಅಲಂಕರಿಸಿದ್ದರು. ಲೂಸಿಯನ್ನು ಸುಮಂಗಲೆಯರು ಆರತಿ ಬೆಳಗಿದ್ದು ವಿಶೇಷ. ಮನೆ ಮಂದಿಯಷ್ಟೇ ಅಲ್ಲದೆ ನೆರೆಹೊರೆಯವರೂ ಸಂಭ್ರಮದಲ್ಲಿ ಭಾಗಿಯಾಗಿದ್ದರು.