ಹಲಗೂರು: ಹೋನಗನ ಹಳ್ಳಿ ಕೆರೆ ತುಂಬಿ ಕೋಡಿ ನೀರು ಹಾಗೂ ಭೀಮ ನದಿ ತುಂಬಿ ಹರಿದ ಪರಿಣಾಮ ಸಾಕಣೆ ಕೇಂದ್ರಕ್ಕೆ ನೀರು ನುಗ್ಗಿ 45 ಆಡುಗಳು, ಒಂದು ಕರು ಮೃತಪಟ್ಟಿದೆ.
ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ಜಮೀಲ್ ಪಾಷಾ ಎಂಬವರ ಆಡು ಸಾಕಣೆ ಕೇಂದ್ರಕ್ಕೆ ಭೀಮ ನದಿಯ ನೀರು ನುಗ್ಗಿ 45 ಆಡುಗಳು, ಒಂದು ಹಸುವಿನ ಕರು ಮೃತಪಟ್ಟಿದೆ. ಮೂರು ಹಸುವಿನ ಕರುಗಳು ಹಾಗೂ ಶೆಡ್ಡಿನಲ್ಲಿದ್ದ ರಾಜು ಎಂಬ ಕಾರ್ಮಿಕನನ್ನು ತೆಪ್ಪದ ಮೂಲಕ ಮಧ್ಯರಾತ್ರಿ ರಕ್ಷಣೆ ಮಾಡಲಾಗಿದೆ.
ಹಲಗೂರು ಗ್ರಾಮದ ನಿವಾಸಿ ಜಮೀಲ್ ಪಾಷಾ ರಾಷ್ಟ್ರೀಯ ಹೆದ್ದಾರಿ ಸಮೀಪದ ಜಮೀನಿನಲ್ಲಿ ಆಡು, ಹಸು ಸಾಕಣೆ ಮಾಡುತ್ತಿದ್ದರು. ಭಾನುವಾರ ರಾತ್ರಿ ಹೋಬಳಿಯಲ್ಲಿ ಭಾರಿ ಮಳೆ ಸುರಿದ ಪರಿಣಾಮ ಹೋನಗನಹಳ್ಳಿ ಕೆರೆ ತುಂಬಿ ಕೋಡಿ ಬಿದ್ದಿದೆ. ಇದರೊಂದಿಗೆ ನದಿ ತುಂಬಿ ಹರಿದಿದೆ. ಪರಿಣಾಮ ನೀರು ಆಡುಗಳ ಶೆಡ್ಡಿಗೆ ನುಗ್ಗಿತು. ಇದನ್ನು ಗಮನಿಸಿದ ಕಾರ್ಮಿಕ ರಾಜು ಕೂಡಲೇ ಮಾಲೀಕ ಪಾಷಾ ಅವರಿಗೆ ಮಾಹಿತಿ ನೀಡಿದ. ಮಾಲೀಕ ತಡರಾತ್ರಿಯೇ ಮಳವಳ್ಳಿಯಿಂದ ತೆಪ್ಪ ತರಿಸಿ ಕಾರ್ಮಿಕನನ್ನು ರಕ್ಷಣೆ ಮಾಡಿದರು. ಆಡುಗಳಿದ್ದ ಶೆಡ್‌ಗಳನ್ನು ತೆರೆದಾಗ ನೀರಿನಲ್ಲಿ ಮೃತಪಟ್ಟಿದ್ದ ಆಡುಗಳು ಕೊಚ್ಚಿ ಹೋದವು. ಸ್ಥಳದಲ್ಲಿದ್ದ ಮೂರು ಕರುಗಳನ್ನು ರಕ್ಷಿಸಲಾಗಿದೆ. ಮೂರು ಜಟಕಾ ಗಾಡಿಗಳು, ಒಂದು ಬೈಕ್, ಕಾರು ನೀರಿನಲ್ಲಿ ಮುಳುಗಿದ್ದು ಶೆಡ್ಡಿನಲ್ಲಿ ಒಂದು ಹಸುವಿನ ಕರು ಹಾಗೂ ಕೆಲ ಆಡುಗಳ ದೇಹ ಪತ್ತೆಯಾಗಿದೆ.
ಭೀಮಾ ನದಿ ಪಕ್ಕದಲ್ಲಿದ್ದ ಎಲೆ ತೋಟಗಳು, ಇಟ್ಟಿಗೆ ಫ್ಯಾಕ್ಟರಿಗೆ ಹಾನಿಯಾಗಿದೆ. ವೀರಶೈವ ರುದ್ರಭೂಮಿ ಜಲಾವೃತವಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಮುತ್ತತ್ತಿಗೆ ಹೋಗುವ ರಸ್ತೆ ಪೂರ್ಣಗೊಂಡಿಲ್ಲದ ಕಾರಣ ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆಯ ಮೇಲೆ ನೀರು ಹರಿದು ರಸ್ತೆ ಸಂಪರ್ಕ ಇಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗಿದೆ.
ನೀರು ಸರಬರಾಜು ಘಟಕಗಳು ಜಲಾವೃತ
ದಳವಾಯಿಕೋಡಹಳ್ಳಿ ಬಳಿಯಿರುವ ಹೊನಗನಹಳ್ಳಿ ಕೆರೆ ಕೋಡಿ ಬಿದ್ದು ಬೆಂಗಳೂರು ಜಲ ಮಂಡಳಿ ನೀರು ಸರಬರಾಜು ಘಟಕಗಳು ಜಲಾವೃತವಾಗಿವೆ.