ಜಿಲ್ಲೆ

ಸಾಂಸ್ಥಿಕ ಕ್ವಾರಂಟೈನ್ ತಪ್ಪಿಸಿಕೊಳ್ಳಲು ಒತ್ತಡ, ನಾನಾ ನೆವ!

ಧಾರವಾಡ: ಲಾಕ್​ಡೌನ್ ಕೊಂಚ ಸಡಿಲಿಕೆಯಾಗುತ್ತಿದ್ದಂತೆ ಹೊರ ರಾಜ್ಯಗಳಿಂದ ಬರುವ ವ್ಯಕ್ತಿಗಳು ಸುಲಭವಾಗಿ ತಪ್ಪಿಸಿಕೊಂಡು ತಮ್ಮ ಮನೆಗಳಿಗೆ ಹೋಗದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಿದೆ. ಅದಕ್ಕಾಗಿ ಕೃಷಿ ವಿಶ್ವವಿದ್ಯಾಲಯದಲ್ಲಿ ನೋಂದಣಿ ಮತ್ತು ವೈದ್ಯಕೀಯ ತಪಾಸಣೆ ಕೇಂದ್ರ ತೆರೆಯಲಾಗಿದೆ.

ಹೊರ ರಾಜ್ಯಗಳಲ್ಲಿ ನೆಲೆಸಿರುವವರು ಆಯಾ ಜಿಲ್ಲಾಡಳಿತದಿಂದ ಇ ಪಾಸ್ ಪಡೆದು ಆಗಮಿಸುತ್ತಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, ಯಾವುದೇ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವ ಎಲ್ಲ ಪ್ರಯಾಣಿಕರು ರೋಗ ಲಕ್ಷಣಗಳಿಲ್ಲದಿದ್ದರೂ ಮುಂಜಾಗ್ರತೆ ಕ್ರಮವಾಗಿ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಬೇಕು. ಈ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವ ಮೂಲಕ ಕೋವಿಡ್ ಗುಣಲಕ್ಷಣಗಳಿದ್ದವರ ಮೇಲೆ ನಿಗಾ ವಹಿಸಿ ನೇರವಾಗಿ ಹುಬ್ಬಳ್ಳಿಯ ಕಿಮ್ಸ್​ಗೆ ದಾಖಲಿಸಲಾಗುತ್ತಿದೆ.

ಪ್ರಯಾಣಿಕರಿಂದ ವಾದ- ಒತ್ತಡ: ಇ ಪಾಸ್ ಪಡೆದು ಜಿಲ್ಲೆಗೆ ಆಗಮಿಸುವ ಪ್ರಯಾಣಿಕರಲ್ಲಿ ಕೆಲವರು ಸಾಂಸ್ಥಿಕ ಕ್ವಾರಂಟೈನ್​ಗೆ ಒಪ್ಪದೆ ಮನೆಗೆ ಹೋಗಲು ಬಿಡುವಂತೆ ಒತ್ತಡ ಹೇರುತ್ತಿರುವುದಾಗಿ ತಿಳಿದುಬಂದಿದೆ. ಇ ಪಾಸ್​ನಲ್ಲಿ 14 ದಿನಗಳ ಕ್ವಾರಂಟೈನ್ ಕಡ್ಡಾಯ ಎಂದು ನಮೂದಾಗಿರುವುದಿಲ್ಲ. ಇದನ್ನೇ ಮುಂದಿಟ್ಟುಕೊಂಡು ವಾದ ಮಾಡುತ್ತಾರೆ. ಕರೊನಾ ಇಲ್ಲದ ಕಡೆಯಿಂದ ಬಂದಿದ್ದೇನೆ, ಇಲ್ಲಿರುವುದಕ್ಕಿಂತ ಮನೆಯಲ್ಲಿ ಸುರಕ್ಷಿತವಾಗಿರುತ್ತೇನೆ, ಮನೆಯಲ್ಲೇ ಪ್ರತ್ಯೇಕವಾಗಿ ಇರಲು ವ್ಯವಸ್ಥೆ ಇದೆ, ಬೇಕಿದ್ದರೆ ಬಂದು ನೋಡಿಕೊಂಡು ಒಪ್ಪಿಗೆ ಕೊಡಿ… ಎಂದೆಲ್ಲ ಹೇಳಿ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಕೆಲವರಂತೂ ಇಲ್ಲಿ 14 ದಿನ ಉಳಿಯುವಷ್ಟರಲ್ಲಿ ಲಾಕ್​ಡೌನ್ ಮುಗಿದರೆ ಮತ್ತೆ ಮರಳಬೇಕಾಗುತ್ತದೆ, ಜಿಲ್ಲೆಗೆ ಬಂದೂ ಊರಿಗೆ ಹೋಗಿಲ್ಲ ಎಂಬಂತಾಗುತ್ತದೆ. ಹೀಗಾಗಿ ಮನೆಗೆ ಹೋಗಲು ಬಿಡಿ ಎಂದು ಕೋರುತ್ತಾರೆ. ಇದಕ್ಕೆಲ್ಲ ಸೊಪ್ಪು ಹಾಕದ ಅಧಿಕಾರಿಗಳು, ಸಾಂಸ್ಥಿಕ ಅಥವಾ ವೈಯಕ್ತಿಕ ಖರ್ಚಿನಲ್ಲಿ ಕ್ವಾರಂಟೈನ್​ನಲ್ಲಿ ಇರುವ ಆಯ್ಕೆ ನೀಡುತ್ತಿದ್ದಾರೆ.

1073 ಜನ ಆಗಮನ: ಜಿಲ್ಲೆಯಲ್ಲಿ ಭಾನುವಾರ ಸಂಜೆವರೆಗೆ ಹೊರ ರಾಜ್ಯಗಳಿಂದ 1073 ಜನರ ಆಗಮನವಾಗಿದೆ. ತಾಪಮಾನ ಪರೀಕ್ಷೆ ನಂತರ ಅಲ್ಲೇ ತೆರೆಯಲಾದ ಕೇಂದ್ರದಲ್ಲಿ ಗಂಟಲ ದ್ರವದ ಮಾದರಿಯನ್ನು ಕಡ್ಡಾಯವಾಗಿ ಪಡೆಯಲಾಗುತ್ತದೆ. ನಂತರ ಕವಿವಿ ವ್ಯಾಪ್ತಿಯ ಅಥವಾ ಸರ್ಕಾರಿ ಹಾಸ್ಟೆಲ್​ಗಳಿಗೆ ಕ್ವಾರಂಟೈನ್​ಗೆ ಕಳುಹಿಸಲಾಗುತ್ತದೆ. ಪರೀಕ್ಷೆಗೊಳಪಟ್ಟ 2-3 ದಿನದಲ್ಲಿ ಮೊದಲ ವರದಿ ಬರುತ್ತದೆ. ನಂತರದ 12ನೇ ದಿನಕ್ಕೆ 2ನೇ ವರದಿ ಬರುವಷ್ಟರಲ್ಲಿ ಸಾಂಸ್ಥಿಕ ಕ್ವಾರಂಟೈನ್ ಅವಧಿ ಮುಗಿದು ಹೋಗುತ್ತದೆ.

ಚೆಕ್​ಪೋಸ್ಟ್​ಗಳಿಂದ ಮಾಹಿತಿ: ಮೊದಲ ಟೆಸ್ಟ್​ನ ವರದಿ ಕರೊನಾ ಪಾಸಿಟಿವ್ ಬಂದರೆ ನೇರವಾಗಿ ಹುಬ್ಬಳ್ಳಿಯ ಕಿಮ್್ಸ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತದೆ. ಬೇರೆಡೆಯಿಂದ ಬರುವವರನ್ನು ಧಾರವಾಡ ಜಿಲ್ಲೆ ಪ್ರವೇಶಿಸುವ ಮುನ್ನ ತೇಗೂರ ಬಳಿಯ ಚೆಕ್​ಪೋಸ್ಟ್​ನಲ್ಲಿ ವಿಚಾರಣೆಗೊಳಪಡಿಸಲಾಗುತ್ತದೆ. ಪ್ರಯಾಣಿಕರ ವಿವರ, ಇ ಪಾಸ್, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ವಾಹನದ ಫೋಟೋ ಸಮೇತ ತಪಾಸಣಾ ಕೇಂದ್ರಕ್ಕೆ ಮಾಹಿತಿ ರವಾನಿಸಲಾಗುತ್ತದೆ. ಅಲ್ಲಿಂದ ಅರ್ಧ ಗಂಟೆಯಲ್ಲಿ ವಾಹನ ಬರದಿದ್ದರೆ ಅದನ್ನು ಟ್ರ್ಯಾಕ್ ಮಾಡಿ ಪತ್ತೆ ಹಚ್ಚುವ ವ್ಯವಸ್ಥೆ ಇಲ್ಲಿರುವುದು ವಿಶೇಷ.

ಹೊರ ರಾಜ್ಯಗಳಿಂದ ಆಗಮಿಸುವ ಎಲ್ಲರೂ ಕಡ್ಡಾಯವಾಗಿ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿರುವ ನೋಂದಣಿ ಮತ್ತು ವೈದ್ಯಕೀಯ ತಪಾಸಣೆ ಕೇಂದ್ರಕ್ಕೆ ಭೇಟಿ ನೀಡಿ ಕ್ವಾರಂಟೈನ್​ಗೆ ಒಳಪಡಬೇಕು. ಇ ಪಾಸ್ ಸಾಂಸ್ಥಿಕ ಅಥವಾ ಸ್ವಂತ ಖರ್ಚಿನಲ್ಲಿ ಕ್ವಾರಂಟೈನ್ ಹೊರತು ಹೋಂ ಕ್ವಾರಂಟೈನ್​ಗೆ ಬಳಕೆಯಾಗುವುದಿಲ್ಲ. ಯಾರಾದರೂ ಜಿಲ್ಲಾಡಳಿತದ ಕಣ್ತಪ್ಪಿಸಿ ಮನೆಗಳಲ್ಲಿ ನೆಲೆಸಿದ್ದರೆ ಸಹಾಯವಾಣಿ 1077ಗೆ ಮಾಹಿತಿ ನೀಡಬೇಕು. | ಮೋಹನಕುಮಾರ ಹಂಚಾಟೆ, ಡಿಡಿಪಿಐ ಹಾಗೂ ನೋಡಲ್ ಅಧಿಕಾರಿ