ಚಾಮರಾಜನಗರ: ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು ಪೂರಕವಾಗಿವೆ ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಹೇಳಿದರು.
ಸ್ವಾತಂತ್ರ್ಯ ದಿನಾಚರಣೆ ಹಾಗೂ ರಾಷ್ಟ್ರೀಯ ಖೋ-ಖೋ ದಿನಾಚರಣೆ ಅಂಗವಾಗಿ ತಾಲೂಕಿನ ವೆಂಕಟಯ್ಯನಛತ್ರ ಗ್ರಾಮದ ಸರಕಾರಿ ಪ್ರೌಢ ಶಾಲಾವರಣದಲ್ಲಿ ್ರೆಂಡ್ಸ್ ಕ್ಲಬ್, ಜಿಲ್ಲಾ ಖೋ-ಖೋ ಸಂಸ್ಥೆ, ರೋಟರಿ ಸಿಲ್ಕ್ ಸಿಟಿ ವತಿಯಿಂದ ಭಾನುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಖೋ-ಖೋ ಪಂದ್ಯಾವಳಿ-2025 ಹಾಗೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಸಂಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಕ್ರೀಡಾಪಟುಗಳಿಗೆ ಬೇಕಾದ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಜಿಲ್ಲೆಯ ಮೂರು ಕಡೆ ಕ್ರೀಡಾ ತರಬೇತಿ ಸಂಸ್ಥೆಗಳಿದ್ದು, ತರಬೇತಿ ಪಡೆಯುವವರ ಕೊರತೆ ಕಾಡುತ್ತಿದೆ. ಉತ್ತಮ ಕ್ರೀಡಾಪಟುಗಳಿಗೆ ಉದ್ಯೋಗಾವಕಾಶಗಳಿವೆ. ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ಹಿರಿಯ ಕ್ರೀಡಾಪಟು ವಿ.ಶ್ರೀನಿವಾಸಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲೂ ವಿವಿಧ ಕ್ರೀಡೆಗಳನ್ನಾಡುವ ಕ್ರೀಡಾಪಟುಗಳಿದ್ದು, ಅವರನ್ನು ಗುರುತಿಸಿ, ಮೇಲೆತ್ತುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಖೋ ಖೋ ತರಬೇತಿ ಸಂಸ್ಥೆ ಅಧ್ಯಕ್ಷ ಶಮಿತ್ ಕುಮಾರ್ ಮಾತನಾಡಿ, ಮೊದಲನೇ ವರ್ಷ ಆಯೋಜಿಸಿದ್ದ ಜಿಲ್ಲಾಮಟ್ಟದ ಪಂದ್ಯಾವಳಿ ಕ್ರೀಡಾಪಟುಗಳ ಉತ್ತಮ ಪ್ರತಿಬಾ ಪ್ರದರ್ಶನದಿಂದ ಯಶಸ್ವಿಯಾಗಿತ್ತು. ಇದು ಎರಡನೇ ವರ್ಷದ ಪಂದ್ಯಾವಳಿಯಾಗಿದ್ದು, ಈಗಲೂ ನಮ್ಮ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದರು.
ಸಮಾಜ ಸೇವಕ ಶ್ರೀನಿಧಿ ಕುದರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಲಿಯುವ ಶ್ರದ್ಧೆ, ಶಿಸ್ತು ಹಾಗೂ ಪ್ರತಿಭೆ ಇದ್ದರೆ ಅವಕಾಶಗಳು ತಾನಾಗಿಯೇ ಹುಡುಕಿಕೊಂಡು ಬರುತ್ತವೆ. ಈ ನಿಟ್ಟಿನಲ್ಲಿ ಪ್ರಯತ್ನ ನಿಮ್ಮದಾಗಬೇಕು ಎಂದು ಸಲಹೆ ನೀಡಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಲುಮರದ ಸಿ.ಎಂ.ವೆಂಕಟೇಶ್ ಮಾತನಾಡಿ, ಕ್ರೀಡಾ ಚಟುವಟಿಕೆಗಳು ದೈಹಿಕ ಚಟುವಟಿಕೆಗಳ ಜತೆಗೆ ಮಾನಸಿಕ ಆರೋಗ್ಯವನ್ನು ಸಹ ಉತ್ತಮಪಡಿಸಿ ವ್ಯಕ್ತಿಗೆ ಮನರಂಜನೆ ಅಷ್ಟೆ ಅಲ್ಲದೆ ದೈಹಿಕ ಆರೋಗ್ಯಕ್ಕೂ ಸಹಕಾರಿಯಾಗಲಿದೆ. ಹೀಗಾಗಿ ವಿದ್ಯಾರ್ಥಿಗಳು ಪಠ್ಯದ ಜತೆಗೆ ಕ್ಷೀಡಾ ಕ್ಷೇತ್ರದಲ್ಲೂ ಸಹ ಸಾಧನೆ ಮಾಡಿ ಎಂದು ಕಿವಿಮಾತು ಹೇಳಿದರು. ಇದೇ ವೇಳೆ ಸಿ.ಎಂ.ವೆಅಕಟೇಶ್ ಅವರನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಾನಸ ಹಾಗೂ ಪೂರ್ಣಿಮಾ ಅವರನ್ನು ಸನ್ಮಾನಿಸಿಲಾಯಿತು. ತರಬೇತುದಾರ ಕಾರ್ತಿಕ್ ನಾಯಕ್, ಗ್ರಾಪಂ ಸದಸ್ಯ ಮೆಡಿಕಲ್ ಅಶೋಕ್ ಎಚ್.ಆರ್.ಸ್ವಾಮಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಿ.ಕೇಶವನ್, ದೈಹಿಕ ಶಿಕ್ಷಕ ನಟರಾಜು, ಮುಖೇಶ್, ಮುಖಂಡರಾದ ಗೌಡಿಕೆ ನಂಜುಂಡಸ್ವಾಮಿ, ಚಿನ್ನಸ್ವಾಮಿ, ಸಿದ್ದರಾಜು, ರಾಘವೇಂದ್ರ, ರಾಜು ಹೊಸೂರು, ಸತೀಶ್ ಇತರರು ಭಾಗವಹಿಸಿದ್ದರು.