ಚಿತ್ರದುರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಬಸವ ತತ್ವಕ್ಕೆ ಮನ್ನಣೆ ನೀಡಿ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ರಾಜ್ಯದ ಘನತೆ ಹೆಚ್ಚಿಸಿದೆ ಎಂದು ಇಮ್ಮಡಿ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.
ಶತಮಾನಗಳು ಉರುಳಿದರೂ ಈ ಸಮಾಜ ಅಸಮಾನತೆ, ಜಾತಿ ತಾರತಮ್ಯ, ಮೇಲು-ಕೀಳು, ಶ್ರೇಷ್ಠ-ಕನಿಷ್ಠ ಈ ಬಗೆಯ ನಾನಾ ರೋಗಗಳನ್ನು ತನ್ನ ಬೆನ್ನಿಗೆ ಅಂಟಿಸಿಕೊಂಡೇ ಬರುತ್ತಿದೆ. ಹಿಡಿಯಷ್ಟು ಜನ ಫಲಾನುಭವಿಗಳಾಗಲು ಬಹುಪಾಲು ಮಂದಿ ತೊಂದರೆ ಅನುಭವಿಸಬೇಕಾದ ಪರಿಪಾಠ ಇಂದಿಗೂ ನಿಂತಿಲ್ಲ ಎಂದು ಬೇಸರಿಸಿದ್ದಾರೆ.
ಇರಲಿಕ್ಕೊಂದು ಸೂರು, ತೊಡಲಿಕ್ಕೊಂದು ಬಟ್ಟೆ, ದುಡಿಯಲಿಕ್ಕೊಂದು ಕಾಯಕ ಒದಗಿಸಲಾರದ ಈ ಸಮಾಜ ದ್ವೇಷಾಸೂಯೆಗಳನ್ನು ಮಾತ್ರ ಮುಂದಿನ ಶತಮಾನಗಳಿಗೂ ಹೆಚ್ಚಾಗುವಷ್ಟು ಬಿತ್ತುತ್ತಿದೆ. ಇದು ಬಹಳ ಆತಂಕದ ವಿಚಾರ. ಬಸವಣ್ಣ ಅವರಂತ ಶ್ರೇಷ್ಠ ಚಿಂತಕ 12ನೇ ಶತಮಾನದಲ್ಲಿ ನಮ್ಮ ನಾಡಿಗೆ ಕೊಟ್ಟ ಅರಿವು ಜಾಗತಿಕ ಮಟ್ಟದಲ್ಲಿ ಯಾವ ಭೂ ಭಾಗದಲ್ಲೂ ಕೊಟ್ಟಿರಲಿಕ್ಕಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅವರ ಅರಿವಿನ ವಚನಗಳ ಸಾರ ಉದಾತ್ತ ಚಿಂತನೆಗಳಿಂದ ಕೂಡಿದ್ದು, ಇಂದಿಗೂ ಪ್ರಸ್ತುತ. ನಿಜವಾದ ಅರ್ಥದಲ್ಲಿ ಸಮಾಜೋ-ಧಾರ್ಮಿಕ ಸುಧಾರಕರು. ನಮ್ಮ ಬುದಿ,್ಧ ಮನಸ್ಸುಗಳನ್ನು ಕ್ರಿಯಾಶೀಲವಾಗಿಸುವ, ಚೈತನ್ಯ ತುಂಬುವ ಒಂದು ಅದ್ಭುತ ಶಕ್ತಿ. ಅಲ್ಲದೆ, ತತ್ವಾದರ್ಶ, ಮೌಲ್ಯ ಅಳವಡಿಸಿಕೊಳ್ಳಲು ವಚನಗಳು ಪ್ರೇರಣೆ ನೀಡುತ್ತದೆ ಎಂದು ತಿಳಿಸಿದ್ದಾರೆ.
ಜನಭಾಷೆಯನ್ನು ದೇವ ಭಾಷೆಯನ್ನಾಗಿಸಿದ, ಶಿಷ್ಟದಿಂದ ಪರಿಶಿಷ್ಟದ ಕಡೆಗೆ, ಕೇಂದ್ರದಿಂದ ಅಂಚಿನ ಕಡೆಗೆ, ಪುರುಷ ಶಾಹಿಯಿಂದ ಲಿಂಗ ಸಂಬಂಧಿ ಸಮಾನತೆ ಕಡೆಗೆ, ಏಕರೂಪಿ ಸಮಾನತೆಯಿಂದ ಬಹುರೂಪಿ ಸಮಾನತೆಗೆ ಕಡೆಗೆ, ಆಲಯದಿಂದ ಬಯಲ ಕಡೆಗೆ ಹರಿಯುವಂತೆ-ಸರಿಯುವಂತೆ ಮಾಡುವಲ್ಲಿ ಬಸವ ಸಂಸ್ಕೃತಿಯ ಕಾಣಿಕೆ ಅಪಾರವಾಗಿದೆ ಎಂದಿದ್ದಾರೆ.
ಬಹುಸಂಖ್ಯೆಯ ಶಿವಶರಣ-ಶರಣೆಯರು ವಿವಿಧ ಕಾಯಕ ಜಾತಿಯ ಸಂಸ್ಕೃತಿಯ ರಾಯಭಾರಿಗಳು. ಬಹುಜಾತಿಯ ಸಂಸ್ಕೃತಿಯ ರಾಯಭಾರಿಗಳ ನಾಯಕ ಬಸವಣ್ಣ. ಶಿವಶರಣರೇ ಒಪ್ಪುವಂತೆ ಅವರೆಲ್ಲರ ಸಾಂಸ್ಕೃತಿಕ ನಾಯಕ ಬಸವಣ್ಣ ಎಂಬುದು ಸಮರ್ಥನೀಯ ಎಂದು ತಿಳಿಸಿದ್ದಾರೆ.
ಈ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ, ತಾರತಮ್ಯ ಮೀರಬೇಕೆಂದು ಹೇಳಿದ, ಬದುಕನ್ನು ಕಾಯಕ ಪ್ರಧಾನವಾಗಿ ರೂಪಿಸಿಕೊಳ್ಳಬೇಕೆಂದು ನಿವೇದಿಸಿಕೊಂಡ ವಿಶ್ವ ಮಾನವತಾವಾದಿ. ಎಲ್ಲ ನೊಂದ ಜನರಿಗೆ ಆತ್ಮವಿಶ್ವಾಸ ನೀಡುವ ಮನ್ವಂತರ ಪ್ರವರ್ತಕ ಬಸವಣ್ಣ ನಮ್ಮ ರಾಜ್ಯದ ಸಾಂಸ್ಕೃತಿಕ ನಾಯಕ ಅಂತ ಘನತೆಯಿಂದ ಗೌರವದಿಂದ ಗರ್ವದಿಂದ ಹೇಳೋಣ ಎಂದು ಸ್ವಾಮೀಜಿ ತಿಳಿಸಿದ್ದಾರೆ.