ಜಿಲ್ಲೆ

ಸಾಂಸ್ಕೃತಿಕ ನಗರಿಗೆ ಸಿಕ್ಕೀತೆ ಭರಪೂರ ಕೊಡುಗೆಗಳು?

ಮಂಜುನಾಥ ಟಿ.ಭೋವಿ ಮೈಸೂರು

ರಾಜ್ಯ ಬಿಜೆಪಿ ಸರ್ಕಾರ ತನ್ನ ಆಡಳಿತ ಅವಧಿಯ ಕೊನೆಯ ಬಜೆಟ್ ಮಂಡನೆಗೆ ಮುಂದಾಗುತ್ತಿದ್ದು, ಈ ಬಾರಿಯ ಆಯವ್ಯಯದಲ್ಲಿ ಜಿಲ್ಲೆಗೆ ಭರಪೂರ ಕೊಡುಗೆಗಳು ಸಿಗಬಹುದೆಂದು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಮುಖ್ಯಮಂತ್ರಿಯೂ ಆಗಿರುವ ಹಣಕಾಸು ಸಚಿವ ಬಸವರಾಜ ಬೊಮ್ಮಾಯಿ ಫೆ.17ರಂದು 2023-24ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ವಿಧಾನಸಭಾ ಚುನಾವಣೆ ಹೊತ್ತಿಲಲ್ಲಿ ಇದು ನಡೆಯುತ್ತಿದೆ. ನಿರೀಕ್ಷೆಯಂತೆ ಎಲೆಕ್ಷನ್ ಬಜೆಟ್ ಆಗಲಿದೆ. ಜನಪ್ರಿಯ ಘೋಷಣೆಗಳ ಸಾಧ್ಯತೆ ಇದೆ. ಇದರಲ್ಲಿ ಜಿಲ್ಲೆಗೆ ಏನು ಸಿಗಲಿದೆ ಎಂಬ ಕುತೂಹಲ ಮೂಡಿದೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಅಪಾರ ಕೊಡುಗೆಗಳು ದೊರೆತಿವೆ. ಬಳಿಕ ಅಧಿಕಾರಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಹೇಳಿಕೊಳ್ಳುವ ಯೋಜನೆ ಏನು ದೊರೆಯಲಿಲ್ಲ. ಬಿಜೆಪಿ ಸರ್ಕಾರದಲ್ಲೂ ದೊಡ್ಡ ಮಟ್ಟದ ಉಡುಗೊರೆ ಏನೂ ಸಿಕ್ಕಿಲ್ಲ. ಕೊನೆ ಬಜೆಟ್‌ನಲ್ಲಿ ಏನು ಧಕ್ಕಬಹುದು? ಬಜೆಟ್‌ನಲ್ಲಿ ಘೋಷಣೆಯಾದರೂ ಚುನಾವಣೆ ಸಂದರ್ಭದಲ್ಲಿ ಅದು ಜಾರಿ ಆಗಲಿದೆಯೇ? ಎಂಬೆಲ್ಲ ಪ್ರಶ್ನೆಗಳು ಮೂಡಿವೆ.

ದಸರಾ ಪ್ರಾಧಿಕಾರ ರಚಿಸಿ
ಪ್ರತಿ ವರ್ಷ ಕೊನೆ ಕ್ಷಣದಲ್ಲಿ ತರಾತುರಿ ಸಿದ್ಧತೆ, ಅರೆಬರೆಯಾಗಿ ನಾಡಹಬ್ಬ ದಸರಾ ಮಹೋತ್ಸವ ಆಯೋಜಿಸಲಾಗುತ್ತಿದೆ. ಇದನ್ನು ತಪ್ಪಿಸಿ ಅಚ್ಚುಕಟ್ಟಾಗಿ ದಸರೆ ನಡೆಸಲು ದಸರಾ ಪ್ರಾಧಿಕಾರ ರಚಿಸಬೇಕು ಎಂಬ ಹಲವು ದಶಕಗಳ ಬೇಡಿಕೆಗೆ ಈ ಬಜೆಟ್‌ನಲ್ಲಿಯಾದರೂ ಆದ್ಯತೆ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಪ್ರವಾಸೋದ್ಯಮಕ್ಕೆ ಜೀವಚೈತನ್ಯ ನೀಡಿ
ಮೈಸೂರಿನ ಆದಾಯ ಮೂಲವಾದ ಪ್ರವಾಸೋದ್ಯಮಕ್ಕೆ ಜೀವಚೈತನ್ಯ ತುಂಬಬೇಕಾಗಿದೆ. ವರ್ಷ ಪೂರ್ತಿ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರುವಂತೆ ಮಾಡಲು ವಿಶೇಷ ಯೋಜನೆ ರೂಪಿಸಬೇಕು. ಜತೆಗೆ, ಕಾಡಂಚಿನ ಕಬಿನಿ ಹಿನ್ನೀರು ಪ್ರದೇಶದ ವನ್ಯಜೀವಿ, ಅರಣ್ಯ ಪ್ರವಾಸ ಅಭಿವೃದ್ಧಿ, ಚುಂಚನಕಟ್ಟೆ ಜಲಪಾತೋತ್ಸವಕ್ಕೆ ಇನ್ನಷ್ಟು ರಂಗು ತುಂಬಬೇಕು. ಪುಣ್ಯಕ್ಷೇತ್ರ ತಲಕಾಡು ಪ್ರದೇಶವನ್ನು ಯಾತ್ರಾ ಸ್ಥಳವಾಗಿ ಪರಿವರ್ತನೆ ಮಾಡಬೇಕಾಗಿದೆ.

ನಗರ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿ ಮಾಡಬೇಕು. ಐತಿಹಾಸಿಕ ದೇವರಾಜ ಮಾರುಕಟ್ಟೆ ಕಟ್ಟಡ, ಲ್ಯಾನ್ಸ್‌ಡೌನ್ ಕಟ್ಟಡಗಳ ಜೀರ್ಣೋದ್ಧಾರಕ್ಕೆ ಕ್ರಮ ವಹಿಸಬೇಕು. ನಗರದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಒತ್ತು ನೀಡಬೇಕು. ಇದಕ್ಕಾಗಿ ಒಂದು ಸಾವಿರ ಕೋಟಿ ರೂ. ನೀಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.

ಪೆರಿಫೆರಲ್ ರಿಂಗ್ ರಸ್ತೆ ಹಣ ಕೊಡಿ
ವಿಜಯನಗರ ಮತ್ತು ದಟ್ಟಗಳ್ಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಹುಮಹಡಿ ಗುಂಪು ವಸತಿ ಯೋಜನೆಗೆ ಒಪ್ಪಿಗೆ ನೀಡಬೇಕು. ಮೈಸೂರು ಹೊರಭಾಗದಲ್ಲಿ ಹೊರವರ್ತುಲ ರಸ್ತೆ ಟೌನ್ ಪ್ಲಾೃನಿಂಗ್ ಯೋಜನೆಗೆ (ಪೆರಿಫೆರಲ್ ರಿಂಗ್ ರಸ್ತೆ) ಹಣ ಮೀಸಲಿಡಬೇಕು. ಸ್ವಚ್ಛ ನಗರಿ ಎಂಬ ಹಿರಿಮೆ ಹೊಂದಿರುವ ಮೈಸೂರಿನ ನಗರದ ಹೊರವಲಯದಲ್ಲಿ ಕಸದ ರಾಶಿ ಕಣ್ಣಿಗೆ ಕುಕ್ಕುತ್ತದೆ. ಇದು ನಗರದ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಾಗಿದೆ. ಹೀಗಾಗಿ, ನಿರಂತರವಾಗಿ ಸ್ವಚ್ಛತೆ ಕಾಪಾಡಿಕೊಳ್ಳಲು ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡಿ ವ್ಯವಸ್ಥಿತ ಕಾರ್ಯಕ್ರಮ ರೂಪಿಸಬೇಕಿದೆ.

ಎರಡು ವರ್ಷಗಳ ಹಿಂದಿನ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಕಿದ್ವಾಯಿ ಸಂಸ್ಥೆಯ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಇನ್ನೂ ಕಣ್ತೆರೆದಿಲ್ಲ. ಈ ಆಸ್ಪತ್ರೆ ಸ್ಥಾಪನೆಗಾಗಿ ಅಗತ್ಯವಿರುವ ಭೂಮಿಯೊಂದಿಗೆ ಹಣಕಾಸಿನ ನೆರವು ನೀಡಬೇಕಾಗಿದೆ. ಮೈಸೂರು ತಾಲೂಕಿನಲ್ಲಿ ನಿರ್ಮಿಸಲು ಉದ್ದೇಶಿರುವ ಸಿನಿನಗರಿ ಈಗಲೂ ಅಡ್ಡಕತ್ತರಿಗೆ ಸಿಲುಕಿಕೊಂಡಿದೆ. ಇದಕ್ಕಾಗಿ ವಿಶೇಷ ಅನುದಾನ ಕಾಯ್ದಿಡುವ ಮೂಲಕ ಬಹುದಿನ ಕನಸನ್ನು ನನಸು ಮಾಡಬೇಕಿದೆ.

ಕೈಗಾರಿಕೆಗಳ ಬೇಡಿಕೆ

ಮೈಸೂರು ಕೈಗಾರಿಕೆಗಳ ಬೇಡಿಕೆಗೂ ಸ್ಪಂದಿಸಬೇಕು. ಮೈಸೂರು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ರಚನೆ, ಮೈಸೂರು ನಗರಪಾಲಿಕೆ ವ್ಯಾಪ್ತಿಯ ಕೈಗಾರಿಕಾ ಪ್ರದೇಶಗಳಾದ ಬನ್ನಿಮಂಟಪ ಎ, ಬಿ ಬಡಾವಣೆ, ವಿಶ್ವೇಶ್ವರನಗರ ಕೈಗಾರಿಕಾ ಪ್ರದೇಶದ ಮೂಲ ಅಗತ್ಯತೆಯನ್ನು ಪೂರೈಸಬೇಕು. ಹೆಬ್ಬಾಳು, ಮೇಟಗಳ್ಳಿ, ಹೂಟಗಳ್ಳಿ, ಬೆಳವಾಡಿ ಕೈಗಾರಿಕಾ ಪ್ರದೇಶಗಳ ಮೂಲ ಅಗತ್ಯತೆಗಳ ನಿರ್ವಹಣೆ, ಅಭಿವೃದ್ಧಿ ಕಾಮಗಾರಿಗಳಿಗಾಗಿ ಹಣ ಒದಗಿಸಬೇಕು. ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕ ಹೆಲಿಪ್ಯಾಡ್ ನಿರ್ಮಿಸಬೇಕು. ಮೈಸೂರಿನ ಕೆಐಎಡಿಬಿ ಕೈಗಾರಿಕಾ ಪ್ರದೇಶವನ್ನು ಕ್ಲಸ್ಟರ್ ಮಾದರಿಯಲ್ಲೇ ಅಭಿವೃದ್ಧಿಪಡಿಸಲು ಕ್ರಮ ವಹಿಸಬೇಕಾಗಿದೆ.

ಹಿಂದಿನ ಘೋಷಣೆ ಜಾರಿ ಮಾಡಿ
2022-23ನೇ ಸಾಲಿನ ಆಯವ್ಯಯದಲ್ಲಿ ಜಿಲ್ಲೆಗೆ ಸಂಬಂಧಿಸಿದ ಬಹುತೇಕ ಘೋಷಣೆಗಳು ಇನ್ನೂ ಜಾರಿಯಾಗಿಲ್ಲ. ಮೈಸೂರಿನಲ್ಲಿ ಪ್ರವಾಸಿ ವೃತ್ತ ಸ್ಥಾಪನೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಸುಮಾರು 30 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರ, 1,000 ವಿದ್ಯಾರ್ಥಿಗಳ ಸಾಮರ್ಥ್ಯದ ದೀನದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿನಿಲಯ, ಉದ್ಯೋಗಸ್ಥ ಮಹಿಳಾ ವಸತಿ ನಿಲಯ, ಅಗರಬತ್ತಿ ಕ್ಲಸ್ಟರ್ ಅನುಷ್ಠಾನಕ್ಕೆ ತರಬೇಕಾಗಿದೆ. ಕೆ.ಆರ್.ಆಸ್ಪತ್ರೆ ನವೀಕರಣ ಕೆಲಸ ಇನ್ನೂ ಶುರುವಾಗಿಲ್ಲ.

ವಿವಿಧ ಬೇಡಿಕೆಗಳು

  • ಮೈಸೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತಾಲಯ ಆರಂಭ
  • ನಗರದ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್‌ನಲ್ಲಿ ಸಂಜೆ ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭ
  • ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ
  • ಕಬಿನಿ ಜಲಾಶಯದ ಬಳಿ ಕೆಆರ್‌ಎಸ್ ಬೃಂದಾವನ ಮಾದರಿ ಉದ್ಯಾನ ಅಭಿವೃದ್ಧಿ
  • ಚಾಮುಂಡಿ ಬೆಟ್ಟವನ್ನು ನೈಸರ್ಗಿಕವಾಗಿಯೇ ಕಾಪಾಡಿಕೊಂಡು, ಪರಿಸರ ಸ್ನೇಹಿಯಾಗಿ ರೂಪಿಸಲು ಯೋಜನೆ
  • ನಗರ ಬಸ್ ನಿಲ್ದಾಣವನ್ನು ಗ್ರಾಮಾಂತರ ಬಸ್ ನಿಲ್ದಾಣಕ್ಕೆ, ಗ್ರಾಮಾಂತರ ಬಸ್ ನಿಲ್ದಾಣವನ್ನು ಹೊರವಲಯಕ್ಕೆ ಸ್ಥಳಾಂತರ
  • ರಾಷ್ಟ್ರಕವಿ ಕುವೆಂಪು ಮನೆಯನ್ನು ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸುವುದು
ಕೈಗಾರಿಕೆಗಳಿಗೆ ಪಾಲಿಕೆಗಿಂತ 4 ಪಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ಹೆಚ್ಚಿದೆ. ಇದನ್ನು ಕಡಿಮೆ ಮಾಡಬೇಕು. ನನೆಗುದಿಗೆ ಬಿದ್ದಿರುವ ಮೈಸೂರು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ಕೇಂದ್ರ ಸರ್ಕಾರದ ಕೈಗಾರಿಕೆ ಕ್ಲಸ್ಟರ್ ಯೋಜನೆಗೆ ರಾಜ್ಯ ಸರ್ಕಾರ ಭೂಮಿ ನೀಡಬೇಕು. ಅರ್ಧಕ್ಕೆ ನಿಂತಿರುವ ರಪ್ತು ಕೇಂದ್ರಕ್ಕೆ ಬಾಕಿ ಉಳಿದಿರುವ 4 ಕೋಟಿ ರೂ. ಅನುದಾನ ನೀಡಬೇಕು. ಸುರೇಶ್‌ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ, ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್.
ತೆಲಂಗಾಣ ಮಾದರಿಯಲ್ಲಿ ಪ್ರತಿಯೊಬ್ಬರಿಗೂ 5 ಲಕ್ಷ ರೂ. ಜೀವವಿಮೆ, ಮೃತರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು. ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಎಲ್ಲ ಹೋಬಳಿಯಲ್ಲೂ ತೆರೆಯಬೇಕು. ಎಲ್ಲ ಪೌಷ್ಟಿಕ ಆಹಾರ ಧಾನ್ಯವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರವೇ ಖರೀದಿಸಬೇಕು. ಕಾಡಂಚಿನಲ್ಲಿ ಪ್ರಾಣಿಗಳ ಹಾವಳಿಯಿಂದ ಕೃಷಿ ಬೆಳೆ, ರೈತರ ಜೀವ ಹಾನಿ ತಪ್ಪಿಸಲು ವಿಶೇಷ ಕ್ರಮ ವಹಿಸಬೇಕು.ಕುರುಬೂರು ಶಾಂತಕುಮಾರ್, ಅಧ್ಯಕ್ಷ ರಾಜ್ಯ ರೈತ ಸಂಘಟನೆಗಳ ಒಕ್ಕೂಟ