ಕಲಬುರಗಿ: ನೇತಾಜಿ ಸುಭಾಷಚಂದ್ರ ಬೋಸ್ ೧೨೮ನೇ ಜಯಂತಿ ನಿಮಿತ್ತ ಎಐಡಿವೈಒ, ಎಐಎಂಎಸ್‌ಎಸ್, ಎಐಡಿಎಸ್‌ಒ ಸಂಘಟನೆಯಿAದ ಫೆ.೭, ೮, ೯ರಂದು ಸಾಂಸ್ಕೃತಿಕ ಜನೋತ್ಸವವೂ ನಗರದ ಎಸ್.ಎಸ್.ಎಲ್. ಕಾನೂನು ಮಹಾವಿದ್ಯಾಲಯ ಹಾಗೂ ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಜನೋತ್ಸವ ಸಮಿತಿ ಸಂಚಾಲಕ ಮಹೇಶ ನಾಡಗೌಡ ತಿಳಿಸಿದರು.
ಫೆ.೭ರಂದು ಬೆಳಗ್ಗೆ ೧೦.೩೦ಕ್ಕೆ ಎಸ್.ಎಸ್.ಎಲ್.ಕಾನೂನು ಮಹಾವಿದ್ಯಾಲಯದಲ್ಲಿ ಉದ್ಘಾಟನೆ ಹಾಗೂ ಚರ್ಚಾಗೋಷ್ಠಿ ನಡೆಯಲಿದ್ದು, ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಜೆ.ಚಲಮೇಶ್ವರ ಉದ್ಘಾಟಿಸಲಿದ್ದಾರೆ. ಶಿಕ್ಷಣ ಉಳಿಸಿ ಸಮಿತಿ ಉಪಾಧ್ಯಕ್ಷ ವಿ.ಎನ್.ರಾಜಶೇಖರ, ಡಾ.ಶಿವಗಂಗಾ ರುಮ್ಮಾ ಭಾಗವಹಿಸಲಿದ್ದಾರೆ. ಅಶ್ವಿನಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ.೮ರಂದು ಸಂಜೆ ೫ಕ್ಕೆ ಕನ್ನಡ ಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಪ್ರಗತಿಪರ ಗಾಯನ, ಖವ್ವಾಲಿ, ನೃತ್ಯ, ಕಾವ್ಯ, ಕುಂಚ, ನೃತ್ಯ, ಡೊಳ್ಳಿನ ಪದಗಳು, ಕೊಳಲು ವಾದನ, ಮೈಮ್, ಪ್ರೇತಾತ್ಮಗಳು ನಾಟಕ ಪ್ರದರ್ಶನ ನಡೆಯಲಿದೆ. ಗುವಿವಿ ಕುಲಸಚಿವ ಡಾ.ರಮೇಶ ಲಂಡನಕರ್, ಪ್ರೊ.ಸವಿತಾ ತಿವಾರಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಫೆ.೯ರಂದು ಸಂಜೆ ೫.೩೦ಕ್ಕೆ ಡೇರ್‌ಡೆವಿಲ್ ಮುಸ್ತಾಫಾ ಚಿತ್ರ ಪ್ರದರ್ಶನ ಮತ್ತು ನಿರ್ದೇಶಕ ಶಶಾಂಕ್ ಸೋಗಾಲ್ ಜತೆ ಸಂವಾದ ನಡೆಯಲಿದೆ. ಅತಿಥಿಯಾಗಿ ಧಾರವಾಡದ ರಾಮಾಂಜನಪ್ಪ ಆಲ್ದಳ್ಳಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಡಾ.ಸೀಮಾ ದೇಶಪಾಂಡೆ, ತುಳಜಾರಾಮ್, ಪುಟ್ಟರಾಜ ಲಿಂಗಶೆಟ್ಟಿ, ಅಶ್ವಿನಿ ಇದ್ದರು.