ಜಿಲ್ಲೆ

ಸಾಂಸ್ಕೃತಿಕ ಚರಿತ್ರೆ ಹೇಳುವ ಬುದ್ಧ ವಿಹಾರಗಳು

reportermys

ಮೈಸೂರು: ಬುದ್ಧ ವಿಹಾರಗಳು ಭಾರತೀಯ ಸಾಂಸ್ಕೃತಿಕ ಲೋಕದ ಜೀವಸತ್ವದ ಪ್ರತಿರೂಪಗಳು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ.ಭಾಸ್ಕರ್ ಹೇಳಿದರು.


ಮೈಸೂರು ಪ್ರಸಾರಾಂಗ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ಸಹಯೋಗದಲ್ಲಿ ಮಾನಸಗಂಗೋತ್ರಿಯ ಪ್ರೊ.ಬೆಟ್ರಿಕ್ಸ್ ಡಿಸೋಜಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರಚಾರೋಪನ್ಯಾಸ ಕಾಯಕ್ರಮದಲ್ಲಿ ‘ಕರ್ನಾಟಕದ ಬೌದ್ಧ ವಿಹಾರಗಳ ಸಾಂಸ್ಕೃತಿಕ ಮಹತ್ವ’ ಕುರಿತು ಮಾತನಾಡಿದರು.


ವಿಹಾರಗಳು ಬರೀ ಕಟ್ಟಡವಲ್ಲ. ಅದು ಬುದ್ಧಧರ್ಮದ ಚರಿತ್ರೆ, ಭಗವಾನ್ ಬುದ್ಧನ ಇತಿಹಾಸ, ಜ್ಞಾನದ ಚರಿತ್ರೆಯಾಗಿದೆ. ನಾಗಪುರದಲ್ಲಿ ದೇಶದಲ್ಲೇ ದೊಡ್ಡ ವಿಹಾರವಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗದಲ್ಲಿ ವಿಹಾರಗಳು, ಸುಪ್ತಗಳು ಇವೆ. ಇವುಗಳೆಲ್ಲ ಐತಿಹಾಸಿಕ ಸಾಂಸ್ಕೃತಿಕ ಚರಿತ್ರೆಯನ್ನು ಹೇಳುತ್ತವೆ ಎಂದರು.


ಪ್ರಜಾಪ್ರಭುತ್ವ ಮತ್ತು ಚುನಾವಣೆ ವ್ಯವಸ್ಥೆಯ ಸಂಕೀರ್ಣ ಕಾಲಘಟ್ಟದಲ್ಲೂ ಬುದ್ಧ ಧರ್ಮ ಪ್ರಭಾವ ಗುಪ್ತಗಾಮಿನಿಯಾಗಿದೆ. ಸಮಾಜ ಮತ್ತು ಜನರ ಮೇಲೆ ಅದು ಪರಿಣಾಮವನ್ನು ಬೀರುತ್ತಿದೆ. ಸಹಬಾಳ್ವೆ, ಭಾತೃತ್ವ, ಸಮಾನತೆ, ಮಾನವೀಯತೆ ನೆಲೆಸಿರುವುದಕ್ಕೆ ಇದುವೇ ಸಾಕ್ಷಿ ಎಂದರು.


ಮೈವಿವಿ ಪ್ರಸಾರಾಂಗದ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು ಮಾತನಾಡಿ, ಮೈವಿವಿ ಪ್ರಸಾರಾಂಗವು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಪ್ರಸಾರಾಂಗದ ಮೂಲ ನೆಲೆಯಾಗಿದೆ. ಇದಕ್ಕೆ 90 ವರ್ಷ ಸುದೀರ್ಘ ಇತಿಹಾಸವಿದೆ. ಪುಸ್ತಕ ಸಂಸ್ಕೃತಿಯ ಮೂಲಕ ಜ್ಞಾನ, ವಿಚಾರ, ಚಿಂತನೆಯನ್ನು ಪಸರಿಸಿದೆ. ಪ್ರಚಾರೋಪನ್ಯಾಸ ಪ್ರಮುಖ ಚಟುವಟಿಕೆಯಾಗಿದೆ. ಇದರ ಮೂಲಕ ಹಳ್ಳಿ, ನಗರಕ್ಕೂ ವಿದ್ವಾಂಸರ, ಸಂಶೋಧಕರ, ಬರಹಗಾರರ ಉಪನ್ಯಾಸವನ್ನು ಪುಸ್ತಕರೂಪದಲ್ಲಿ ತಲುಪಿಸಲಾಗಿದೆ ಎಂದರು.


ಅಂಬೇಡ್ಕರ್ ಕೇಂದ್ರದ ನಿರ್ದೇಶಕ ಡಾ.ಎಸ್. ನರೇಂದ್ರಕುಮಾರ್ ಇದ್ದರು.