ತಿ.ನರಸೀಪುರ: ವಿದ್ಯಾರ್ಥಿಗಳು ಜಾನಪದ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಜತೆಗೆ ಸಂಶೋಧನೆಯಲ್ಲೂ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಜಾನಪದ ಸಂಗಮ ಹಾಗೂ ಸಾಂಸ್ಕೃತಿಕ, ಕ್ರೀಡೆ ರಾ.ಸೇ. ಯೋಜನೆ, ರೇಂಜರ್ಸ್ ಮತ್ತು ರೋವರ್ಸ್ ಯೂತ್ ರೆಡ್ ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಉದ್ಯೋಗಿಗಳಾಗಿ ದೇಶದ ಅಭಿವೃದ್ಧಿಗೆ ಹೊಸ ವೈಜ್ಞಾನಿಕ ಸಂಶೋಧನಾ ಕಾರ್ಯಗಳನ್ನು ಮಾಡಬೇಕೆಂದು ತಿಳಿಸಿದರು.
ಇದಕ್ಕೂ ಮೊದಲು ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಗುಂಜಾನರಸಿಂಹಸ್ವಾಮಿ ದೇವಸ್ಥಾನದ ಮುಂಭಾಗದಿಂದ ಎತ್ತಿನ ಗಾಡಿ ಮೂಲಕ ಮೆರವಣಿಗೆ ಪ್ರಾರಂಭವಾಯಿತು. ವೀರಗಾಸೆ ಕುಣಿತ, ಸೀರೆ ಉಟ್ಟು ಕಳಸ ಹೊತ್ತ ಹೆಣ್ಣು ಮಕ್ಕಳು, ಬಿಳಿ ಪಂಚೆ, ಶಲ್ಯ ಹಾಕಿಕೊಂಡು ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ಮುಖ್ಯಅತಿಥಿಗಳನ್ನು ಎತ್ತಿನ ಗಾಡಿಯಲ್ಲಿ ಕಾಲೇಜಿನ ಆವರಣದವರೆಗೂ ಮೆರವಣಿಗೆ ಮೂಲಕ ಕರೆತರಲಾಯಿತು.
ಟಿ.ಬಿ ನಾಗೇಂದ್ರ ಪ್ರಸಾದ್, ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ವಿ ಉದಯಕುಮಾರ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರೊ.ದೇವರಾಜೇಗೌಡ, ಜಿ.ಎಸ್.ಡಾ.ಪುಟ್ಟಸ್ವಾಮಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಚಾಲಕ ಡಾ.ಮುತ್ತಮ್ಮ, ಕೆ.ಕೆ. ಪ್ರೋ. ಮಹೇಶ್, ಕ್ರೀಡಾ ಸಮಿತಿ ಸಂಚಾಲಕ ರಾಘವೇಂದ್ರಪ್ರಸಾದ್, ರೆಡ್‌ಕ್ರಾಸ್ ಸಂಚಾಲಕ ಪ್ರೊ.ರಾಮಮೂರ್ತಿ, ಬಿ.ಎಂ.ಡಾ.ಕೆಂಪರಾಜು, ಆರ್, ಡಾ.ಕವಿತಾ, ಐಕ್ಯೂಎಸಿ ಸಂಚಾಲಕ ಡಾ.ಅಮಿತ್, ಡಾ.ರೇಷ್ಮ ಚೆಂಗಪ್ಪ ಇತರರು ಇದ್ದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.