ವಿಜಯವಾಣಿ ಸುದ್ದಿಜಾಲ:
ಗಣರಾಜ್ಯೋತ್ಸವ (ಜ.26) ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಹಾಗೂ ಚಾರಿತ್ರಿಕ ಘಟನೆಗಳನ್ನು ಆಧರಿಸಿದ ಕಾರ್ಯಕ್ರಮಗಳಿಗೆ ಮಹತ್ವ ನೀಡಬೇಕು ಎಂದು ಕಾರ್ವಿುಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧಿಕಾರಿಗಳಿಗೆ ಸೂಚಿಸಿದರು.
ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಗುರುವಾರ ಗಣರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಪೋ›ತ್ಸಾಹಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಬಸವಣ್ಣನವರು, ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಸೇರಿದಂತೆ ರಾಷ್ಟ್ರದ ಮಹಾನ ನಾಯಕರ ಕುರಿತು ಭಾಷಣ ಸ್ಪರ್ಧೆಯನ್ನು ನಡೆಸಬೇಕು. ಅತ್ಯುತ್ತಮವಾಗಿ ಭಾಷಣ ಮಾಡುವ ಆರು ಜನ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟದ ವೇದಿಕೆಯಲ್ಲಿ ಸನ್ಮಾನಿಸಲಾಗುವುದು ಎಂದರು.
ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ ವಿದ್ಯಾರ್ಥಿಗಳ ತಂಡದಿಂದ ಕಾರ್ಯಕ್ರಮ ಆಯೋಜನೆ ಮಾಡಬೇಕಾಗುತ್ತದೆ. ಇತಿಹಾಸದ ಘಟನೆಗಳನ್ನು ಮೆಲುಕು ಹಾಕುವಂತಹ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು. ಜಾನಪದ ಶೈಲಿಯ ಕಾರ್ಯಕ್ರಮಗಳಿಗೂ ಅವಕಾಶ ಒದಗಿಸಬೇಕಾಗುತ್ತದೆ ಎಂದು ಹೇಳಿದರು.
ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಒತ್ತು ನೀಡಬೇಕು. ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಗಣರಾಜ್ಯೋತ್ಸವಕ್ಕೆ ಮೆರುಗು ತರಬೇಕಾಗುತ್ತದೆ. ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಗಣರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಡಿಸಿಪಿ ಮಹಾನಿಂಗ ನಂದಗಾವಿ, ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಸ್ವಾಗತಿಸಿದರು. ಹುಬ್ಬಳ್ಳಿ ಶಹರ ತಹಶೀಲ್ದಾರ ಕಲಗೌಡ ಪಾಟೀಲ ವಂದಿಸಿದರು.