ಸೊರಬ: ದಸರಾ ಉತ್ಸವ ಆಚರಣಾ ಸಮಿತಿಯವರ ಶ್ರದ್ಧೆ, ಸಹಬಾಳ್ವೆ ಹಾಗೂ ಪರಿಶ್ರಮದಿಂದ 10 ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೈಭವದಿಂದ ಆಚರಿಸುತ್ತ ಬಂದಿರುವುದು ಶ್ಲಾಘನೀಯ ಎಂದು ಪ್ರಗತಿಪರ ಕೃಷಿಕ ಷಣ್ಮುಖಪ್ಪ ಚನ್ನಪಟ್ಟಣ ಹೇಳಿದರು.
ಗ್ರಾಮದ ಕಲ್ಯಾಣ ಮಂಟಪದ ಆವರಣದಲ್ಲಿ ಶ್ರೀ ರೇಣುಕಾಂಬ ದೇವಿ ದಸರಾ ಉತ್ಸವ ಆಚರಣಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ, ಧಾರ್ಮಿಕ ಮತ್ತು ದತ್ತಿ ಇಲಾಖೆ, ತಾಲೂಕು ಆಡಳಿತ, ಚಂದ್ರಗುತ್ತಿ ಗ್ರಾಪಂ ಸಹಯೋಗದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ನವರಾತ್ರಿಯಲ್ಲಿ ನಡೆಯುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುತ್ತವೆ. ಜತೆಗೆ ಸ್ಥಳೀಯ ಕಲಾವಿದರ ಪ್ರತಿಭೆ ಅನಾವರಣಕ್ಕೆ ಸಹಕಾರಿ. ಮನುಷ್ಯನ ನಿತ್ಯ ಜೀವನದಲ್ಲಿ ಸಮಸ್ಯೆಗಳು ಇರುವುದು ಸಹಜ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆಯಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದರು.
ಬೆಂಗಳೂರಿನ ಪುರಂದರ ಇಂಟರ್‌ನ್ಯಾಷನಲ್ ಟ್ರಸ್ಟ್‌ನವರು ಕಥಕ್ ನೃತ್ಯ ಮತ್ತು ಸಮೂಹ ಗಾಯನ ಪ್ರಸ್ತುತಪಡಿಸಿದರು. ರೇಣುಕಾಂಬಾ ದಸರಾ ಉತ್ಸವ ಸಮಿತಿ ಅಧ್ಯಕ್ಷ ಆರ್.ಶ್ರೀಧರ್ ಹುಲ್ತಿಕೊಪ್ಪ, ಜಿಪಂ ಮಾಜಿ ಸದಸ್ಯ ತಬಲಿ ಬಂಗಾರಪ್ಪ, ಗ್ರಾಪಂ ಸದಸ್ಯರಾದ ರಾಜಶೇಖರ್, ಪ್ರಮುಖರಾದ ಮಂಜಪ್ಪ, ಚಂದ್ರಶೇಖರ್ ಬಾಪಟ್, ಹನುಮಂತಪ್ಪ, ದತ್ತೋಜಿ, ರವಿ ಇತರರಿದ್ದರು.