ಬೀದರ್: ಸಾಂಸ್ಕೃತಿಕ ಐಕ್ಯತೆ ಮೂಡಿದಾಗ ಮಾತ್ರ ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನ ಜತೆಗೆ ಸಹಿಷ್ಣುತೆಯಿಂದ ಬದುಕಲು ಸಾಧ್ಯ ಎಂದು ಕರ್ನಾಟಕ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಸುನಿತಾ ಕೂಡ್ಲಿಕರ್ ಹೇಳಿದರು.
ನಗರದ ಕರ್ನಾಟಕ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆಯಿಂದ ಮಂಗಳವಾರ ಏರ್ಪಡಿಸಿದ ರಾಷ್ಟ್ರೀಯ ಐಕ್ಯತಾ ಸಪ್ತಾಹದಲ್ಲಿ ಸಾಂಸ್ಕೃತಿಕ ಏಕತೆ ಕುರಿತು ಉಪನ್ಯಾಸ ನೀಡಿ, ಇಂದಿನ ಮಕ್ಕಳು ಇತಿಹಾಸ ಅರಿಯಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಜನರೊಂದಿಗೆ ಸಹಬಾಳ್ವೆಯಿಂದ ಇರಲು ಸಾಧ್ಯ. ಸಂವಿಧಾನ ಮುಂದೆ ನಾವೆಲ್ಲ ಸಮಾನರು. ಸಂವಿಧಾನದ ಆಶಯದಂತೆ ಸಾಂಸ್ಕೃತಿಕ ಐಕ್ಯತೆ ಬದುಕು ರೂಢಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ಕರ್ನಾಟಕ ಪದವಿ ಕಾಲೇಜು ಪ್ರಾಚಾರ್ಯ ಡಾ.ಜಗನ್ನಾಥ ಹೆಬ್ಬಾಳೆ ಮಾತನಾಡಿ, ಜಾತಿ, ಧರ್ಮಕ್ಕೆ ಮಿಗಿಲಾಗಿ ನಾವೆಲ್ಲರೂ ಭಾರತೀಯರು ಒಂದೇ ಎಂಬ ಭಾವನೆಯಿಂದ ಬದುಕಬೇಕು. ಶರಣರ ವಾಣಿಯಂತೆ ಎಲ್ಲರೂ ಕೂಡಿ ಬಾಳುವ, ಹಂಚಿಕೊಂಡು ತಿನ್ನುವ ಗುಣ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಐಕ್ಯತಾ ಸಪ್ತಾಹ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಡಾ. ಮಾದಯ್ಯ ಸ್ವಾಮಿ, ಡಾ. ಸಂಗೀತಾ ಮಾನಾ, ರೇಣುಕಾ ಭಾಗವತಿ ಇದ್ದರು. ಅನೀಲಕುಮಾರ ಚಿಕ್ಕಮಾಣೂರ ಸ್ವಾಗತಿಸಿದರು. ಸುನೀಲ ಮಲಗೆ ನಿರೂಪಣೆ ಮಾಡಿದರು. ವೈಜಿನಾಥ ಚಿಕ್ಕಬಸೆ ಐಕ್ಯತಾ ಸಪ್ತಾಹ ಪ್ರಮಾಣವಚನ ಬೋಧಿಸಿದರು.