ಸಿರಗುಪ್ಪ: ವಾಲ್ಮೀಕಿಯಂತೆ ನಮ್ಮ ವರ್ತನೆಯಲ್ಲಿ ಪರಿರ್ವನೆಯಾಗುವುದೇ ನಿತ್ಯ ಮಂತ್ರವಾಗಬೇಕೆಂದು ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠಾಧಿಪತಿ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದರು.
ಮಹರ್ಷಿ ವಾಲ್ಮೀಕಿ 7ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ವಾಲ್ಮೀಕಿ ಭವನದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ, ವಾಲ್ಮೀಕಿ ವಿದ್ಯಾಭಿವೃದ್ದಿ ಸಂಘದಿಂದ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ವಿವಿಧ ಪಕ್ಷದವರು ಚುನಾವಣೆಯಲ್ಲಿ ನಮ್ಮ ಮತ ಪಡೆದು ಅಧಿಕಾರಕ್ಕೆ ಬಂದ ನಂತರ ನಮ್ಮ ಹಿತ ಮರೆತು ಬಿಡುತ್ತಾರೆ. ಹಾಗಾಗಿ ನಾವೆಲ್ಲ ಸಂಘಟಿತರಾಗಿ ಸಾಂವಿಧಾನಿಕ ಹಕ್ಕುಗಳನ್ನು ಪಡೆದುಕೊಳ್ಳಲು ಜಾಗೃತರಾಗಬೇಕು ಎಂದರು.
ಆದಿಕವಿ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಆಹ್ವಾನ ಪ್ರತಿಗಳನ್ನು ಬಿಡುಗಡೆಗೊಳಿಸಲಾಯಿತು. ಈ ಹಿಂದಿನ ಜಾತ್ರೆಗೆ ಶ್ರಮಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ನಿವೃತ ಪ್ರಾಂಶುಪಾಲ ವೀರೇಶಪ್ಪ, ಪ್ರಮುಖರಾದ ನರೇಂದ್ರಸಿಂಹ, ಅಲಬನೂರು ಮಲ್ಲಯ್ಯ, ಬೆಳಗಲ್ ಬಸವರಾಜ, ರಾರಾವಿ ವೆಂಕಟೇಶ, ಶಿವಪ್ಪ, ಹೆಡಗಿನಾಳ ವೆಂಕಟೇಶ, ವೀರಣ್ಣ, ಹೊನ್ನಪ್ಪ ಭಾಗವಹಿಸಿದ್ದರು.