ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ ಖಂಡಿಸಿ ಪ್ರತಿಭಟನೆ 
ಜಿಲ್ಲೆ

ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ ಖಂಡಿಸಿ ಪ್ರತಿಭಟನೆ

ಚಿಕ್ಕಮಗಳೂರು: ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜಕೀಯ ಲಾಭಕ್ಕಾಗಿ ದುರುಪಯೋಗ ಮಾಡಿಕೊಂಡಿರುವುದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಮುಖಂಡರುಗಳು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಡಿಎಸ್ ಎಸ್ ಜಿಲ್ಲಾ ಸಂಚಾಲಕ ಬಿಳೇಕಲ್ಲು ಬಾಲಕೃಷ್ಣ ಇಡಿ, ಐಟಿ, ಸಿಬಿಐ ಹಾಗೂ ರಾಜಭವನ, ಚುನಾವಣಾ ಆಯೋಗ, ರಾಜ್ಯಪಾಲರ ಅಧಿಕಾರವನ್ನು ಬಳಸಿಕೊಂಡು ಕೇಂದ್ರ ಸರ್ಕಾರ 10 ವರ್ಷಗಳಲ್ಲಿ ದೇಶದ ಅಖಂಡತೆಗೆ ಧಕ್ಕೆ ತಂದೊಡ್ಡಲು ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗುತ್ತಿದೆ ಎಂದು ಆರೋಪಿಸಿದರು.

ದೇಶದ ಅನೇಕ ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷದ ಸರ್ಕಾರಗಳು ಜನಾರ್ಶೀವಾದಿಂದ ಆಯ್ಕೆ ಹೊಂದಿ ರಚನೆಗೊಂಡಿದ್ದು, ಆ ಸರ್ಕಾರಗಳನ್ನು ಅಸ್ಥಿರಗೊಳಿಸುವ ಹುನ್ನಾರ ಮಾಡಿ ಬೇರೆ ಪಕ್ಷದಿಂದ ಆಯ್ಕೆಗೊಂಡಿರುವ ಶಾಸಕರನ್ನು ಪುಸಲಾಯಿಸಿ ಅವರ ಸ್ಥಾನಕ್ಕೆ ರಾಜೀನಾಮೆ ಕೊಡಿಸುತ್ತಿದೆ ಎಂದು ದೂರಿದರು.

ಸಾಂವಿಧಾನಿಕ ಸಂಸ್ಥೆಗಳನ್ನು ರಾಜಕೀಯ ಲಾಭಕ್ಕಾಗಿ ಕೇಂದ್ರ ಸರ್ಕಾರ ಬಳಸಿಲು ಒತ್ತಡ ಹೇರುವುದು, ತನ್ನ ವ್ಯಾಪ್ತಿಯಲ್ಲಿ ಬರುವ ಅಪರಾಧಗಳ ತನಿಖಾ ಸಂಸ್ಥೆಗಳನ್ನು ರಾಜಕೀಯವಾಗಿ ಬಳಸಿಕೊಂಡು ಜನರಿಂದ ಆಯ್ಕೆಗೊಂಡ ಬಿಜೆಪಿಯೇತರ ಸರ್ಕಾರವನ್ನು ಪತನಗೊಳಿಸಲು ದೊಡ್ಡಮಟ್ಟಿನ ಸಂಚು ರೂಪಿಸಿ ಹಿಂ ಬಾಗಿನಿಂದ ಬಿಜೆಪಿ ಅಧಿಕಾರ ಹಿಡಿಯಲು ಹುನ್ನಾರ ನಡೆಸುತ್ತಿದೆ ಎಂದು ದೂರಿದರು.

ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿಸಿ ಮನುವಾದವನ್ನು ಪ್ರತಿಪಾದಿಸುವ ಕೇಂದ್ರ ಸರ್ಕಾರ ಸಂವಿಧಾನಿಕ ಸಂಸ್ಥೆಗಳ ಮೂಲಕವೇ ತಮ್ಮ ವಿರೋಧಿಗಳನ್ನು ಮೆಟ್ಟಿಹಾಕುವ, ಬಾಯಿಮುಚ್ಚಿಸುವ ರಾಜಕಾರಣದ ಮಾದರಿಯೊಂದು ದೇಶದಲ್ಲಿ ಚಾಲ್ತಿಯಲ್ಲಿದೆ. ಈ ಭಾಗವಾಗಿ ಸಿದ್ದರಾಮಯ್ಯ ಅವರ ವಿರುದ್ಧ ಮೂಡ ಪ್ರಕರಣವನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.

ಇಂಥಹ ರಾಜಕಾರಣದ ಆಂತರ್ಯದಲ್ಲಿ ಕೋಮುವಾದ, ಮನುಸಿದ್ಧಾಂತ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಮಿಸುಕಾಡುತ್ತಿದೆ. ಆದ್ದರಿಂದ ಸಿದ್ದರಾಮಯ್ಯ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ಖಂಡಿಸಿ, ಯಥಾಪ್ರಕಾರ ಮುಖ್ಯಮಂತ್ರಿಗಳನ್ನಾಗಿ ಮುಂದುವರೆಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿ ಸಿದರು.

ಇದೇ ವೇಳೆ ಸಾಂವಿಧಾನ ಸಂಸ್ಥೆಗಳನ್ನು ಬಳಸಿಕೊಳ್ಳುವುದನ್ನು ತಡೆಗಟ್ಟಲು ಜಿಲ್ಲಾಡಳಿತದ ಮುಖಾಂತರ ರಾಷ್ಟ್ರಪತಿಗಳಿಗೆ ಡಿಎಸ್ಎಸ್ ಮುಖಂಡರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಡಿಎಸ್ ಎಸ್ ತಾಲೂಕು ಸಂಘಟನಾ ಸಂಚಾಲಕ ಪ್ರಸನ್ನಕುಮಾರ್, ಪ್ರಮುಖರಾದ ವಸಂತ್, ಎಸ್.ಆನಂದ್, ಸತೀಶ್, ರವಿ, ಶ್ಯಾಂಭಾ, ಕೆ.ಕೆ.ಬಾಬು, ಸಿದ್ದಯ್ಯ, ಪುಟ್ಟಪ್ಪ, ಆರ್.ಶೇಖರ್, ಗಿರೀಶ್, ಮಂಜು ಮತ್ತಿತರರಿದ್ದರು.