ಮಡಿಕೇರಿ: ಸಮಾನ ವೇತನ ಮತ್ತು ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿ ಕೊಡಗು ಜಿಲ್ಲಾ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ಸಂಘ ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸುವ ಮೂಲಕ ಶನಿವಾರದಿಂದ ಸಾಂಕೇತಿಕ ಪ್ರತಿಭಟನೆ ಆರಂಭಿಸಿದೆ.
ಕರೊನಾ ವೈರಸ್ ವಿರುದ್ಧ ಜೀವದ ಹಂಗು ತೊರೆದು ಹೋರಾಡುತ್ತಿರುವ ಆರೋಗ್ಯ ಇಲಾಖೆಯ ಗುತ್ತಿಗೆ ಆಧಾರದ ಸಿಬ್ಬಂದಿಗೆ ಸರ್ಕಾರದಿಂದ ಯಾವುದೇ ಭದ್ರತೆ ಮತ್ತು ಸೌಲಭ್ಯ ನೀಡಿಲ್ಲ ಎಂದು ಸಂಘದ ಜಿಲ್ಲಾಧ್ಯಕ್ಷ ಎಂ.ಮಹದೇವಪ್ಪ ಆರೋಪಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನದ ನೌಕರರಿಗೆ ಈಗಾಗಲೇ ಘೋಷಿಸಿರುವ ಬೋನಸ್‌ಗಳಲ್ಲಿನ ನ್ಯೂನತೆ ಸರಿಪಡಿಸಿ, ಬಾಕಿ ಬೋನಸ್ ನೀಡಬೇಕು, ಗುತ್ತಿಗೆ, ಹೊರಗುತ್ತಿಗೆ ನೌಕರರ ಏಜೆನ್ಸಿಯ ಬದಲಾವಣೆ ಹೆಸರಿನಲ್ಲಿ ಕಿರುಕುಳ ನೀಡುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.
ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಸಕಾಲದಲ್ಲಿ ವೇತನ ನೀಡಬೇಕು, ಸಮಾನ ವೇತನ ನಿಗದಿ ಮಾಡಬೇಕು ಮತ್ತು ಸೇವಾ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿ ಮೇ 21ರವರೆಗೆ ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಕೆ.ಮೋಹನ್ ಮೂಲಕ ಸಂಘದ ಪ್ರಮುಖರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.