ಕೆ.ಆರ್.ನಗರ: ಸಂಸತ್ ಚುನಾವಣೆಯಲ್ಲಿ ಸೋತಿದ್ದ ಎಚ್.ವಿಶ್ವನಾಥ್ ಅವರನ್ನು ಜೆಡಿಎಸ್‌ಗೆ ಕರೆತಂದು ಶಾಸಕರಾಗಿ ಮಾಡಿದೆನೆಂಬ ಸಾ.ರಾ.ಮಹೇಶ್ ಅವರ ಹೇಳಿಕೆ ಸತ್ಯಕ್ಕೆ ದೂರ. ಆದರೆ 2018ರ ಚುನಾವಣೆಯಲ್ಲಿ ಸಾ.ರಾ.ಮಹೇಶ್ ಶಾಸಕರಾಗಲು ನನ್ನ ಮತ್ತು ನನ್ನ ಬೆಂಬಲಿಗರ ಅಪಾರ ಶ್ರಮ ಇದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿರುಗೇಟು ನೀಡಿದರು.
ಕಾಂಗ್ರೆಸ್ ಪಕ್ಷ ನನ್ನನ್ನು ಹೊರಹಾಕಿರಲಿಲ್ಲ. ನಾನೇ ರಾಜೀನಾಮೆ ನೀಡಿ ಹೊರಬಂದೆ. ಆದರೆ ನನ್ನನ್ನು ಮಾಜಿ ಶಾಸಕ ದಿ.ಚಿಕ್ಕಮಾದು ಜೆಡಿಎಸ್‌ಗೆ ಬನ್ನಿ ಎಂದು ಒತ್ತಾಯ ಮಾಡಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜತೆ ಮಾತನಾಡಿ ಆ ಪಕ್ಷಕ್ಕೆ ಸೇರಿಸಿದರು. ನಂತರ ಹುಣಸೂರಿನ ಶಾಸಕನಾದನೇ ವಿನಾ ಸಾ.ರಾ.ಮಹೇಶ್ ಅವರಿಂದಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ನಾನು ಈ ರಾಜ್ಯದಲ್ಲಿ ಯಾರದ್ದಾದರೂ ಮುಲಾಜಿನಲ್ಲಿದ್ದರೆ ಅದು ದಿ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಲ್ಲಿ ಮಾತ್ರ. ಇನ್ನು ಎಲ್ಲ ಪಕ್ಷಗಳು ನಮ್ಮ ಮುಲಾಜಿನಲ್ಲಿವೆ ಎಂದ ಅವರು, ಆದ್ದರಿಂದಲೇ ನಾನು ಅವರನ್ನು ಹೆಚ್ಚು ಗೌರವಿಸುತ್ತೇನೆ ಎಂದರು.
ಸಾ.ರಾ.ಮಹೇಶ್ ಅವರನ್ನು ಅಭಿವೃದ್ಧಿ ವಿಚಾರದಲ್ಲಿ ಅಭಿನಂದಿಸುತ್ತೇನೆ. ಆದರೆ ಶಾಸಕರಾದವರು ತಾರತಮ್ಯ ಮಾಡಬಾರದು. ಕುರುಬರು ಮತ ನೀಡಿಲ್ಲ ಎಂಬ ಕಾರಣದಿಂದ ಪಟ್ಟಣದ ಸಂಗೊಳ್ಳಿರಾಯಣ್ಣ ಸಮುದಾಯ, ಗಂಧನಹಳ್ಳಿ ಸಮುದಾಯ ಭವನದ ಅನುದಾನ ತಡೆಹಿಡಿದಿರುವುದು ಸರಿಯಲ್ಲ. ಅಭಿವೃದ್ಧಿಯಲ್ಲಿ ಜನಪ್ರತಿನಿಧಿ ತಾರತಮ್ಯ ಮಾಡಬಾರದು. ಜಾತ್ಯತೀತ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ರಾಜಕೀಯದಲ್ಲಿ ಪಕ್ಷಗಳ ಏಳು-ಬೀಳು ಸಹಜ. ಯಾವುದೇ ಪಕ್ಷ ಮುಳುಗಲ್ಲ. ಸಂದರ್ಭಕ್ಕೆ ತಕ್ಕಂತೆ ತೇಲುತ್ತವೆ. ರಾಹುಲ್‌ಗಾಂಧಿ ಅವರನ್ನು ಪಪ್ಪು, ದಡ್ಡ ಎಂದು ಟೀಕಿಸುತ್ತಿದ್ದ ವಿರೋಧಿಗಳಿಗೆ ಭಾರತ್ ಜೋಡೋ ಯಾತ್ರೆಯ ಮೂಲಕ ಉತ್ತರ ಸಿಕ್ಕಿದ್ದು, ರಾಹುಲ್ ಗಾಂಧಿಗೆ ರಾಜಕೀಯದಲ್ಲಿ ಬೆಳೆಯುವ ಶಕ್ತಿ ಇದೆ ಎಂಬುದು ಅವರ ಹೇಳಿಕೆಗಳು, ನಡವಳಿಕೆಗಳಿಂದ ತಿಳಿಯುತ್ತಿದೆ ಎಂದರು.
ನರೇಂದ್ರ ಮೋದಿ ಅವರು ಉದ್ಯೋಗ ಮೇಳದ ಮೂಲಕ 10 ಲಕ್ಷ ಉದ್ಯೋಗ ಸೃಷ್ಟಿಸಿದ್ದೇವೆ ಎಂದಿದ್ದಾರೆ. ಆದರೆ ಉದ್ಯೋಗ ಮೇಳದಲ್ಲಿ ಮೀಸಲಾತಿ ಇಲ್ಲದೆ ಇರುವುದರಿಂದ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಕ್ಕೆ ಅನ್ಯಾಯವಾಗಲಿದೆ. ಬಲಾಢ್ಯರಿಗೆ ಮಾತ್ರ ಅನುಕೂಲವಾಗಿ, ಬಡವರಿಗೆ ಅನ್ಯಾಯವಾಗಿದೆ. ಯಾವೊಬ್ಬ ನಾಯಕನೂ ಈ ಅನ್ಯಾಯದ ವಿರುದ್ಧ ಧ್ವನಿ ಎತ್ತದಿರುವುದು ನೋವು ತರಿಸಿದೆ ಎಂದು ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.
ನಾನು ಯಾವುದೇ ಪಕ್ಷದಲ್ಲಿ ಇದ್ದರೂ ನನ್ನ ಜಂಡಾ ಬದಲಾಗಬಹುದು. ಆದರೆ ನನ್ನ ಅಜೆಂಡಾ ಬದಲಾಗಲ್ಲ. 40 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಎಲ್ಲ ಸಮುದಾಯಗಳ ಪರವಾಗಿ ಧ್ವನಿ ಎತ್ತಿ, ಜನರಪರ ಕೆಲಸ ಮಾಡಿದ್ದೇನೆ. ಕಾಲಚಕ್ರ ಉರುಳಿದಂತೆ ನಾವು ಬದಲಾಗಬೇಕಾಗುತ್ತದೆ ಎಂದು ತಿಳಿಸಿದರು.