ಕೆ.ಆರ್.ನಗರ: ಶಾಸಕ ಸಾ.ರಾ.ಮಹೇಶ್ ಅವರ ನಿರಂತರ ಹೋರಾಟ ಮತ್ತು ಶ್ರಮದಿಂದ ತಾಲೂಕಿನ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯ ಮರು ಆರಂಭವಾಗಿದೆಯೇ ವಿನಃ ಬಿಜೆಪಿಯವರಿಂದ ಅಲ್ಲ ಎಂದು ಶ್ರೀರಾಮ ಸಕ್ಕರೆ ಕಾರ್ಖಾನೆ ಮಾಜಿ ಉಪಾಧ್ಯಕ್ಷ ಹಾಡ್ಯ ಕುಮಾರ್ ಹೇಳಿದರು.
ಸಕ್ಕರೆ ಕಾರ್ಖಾನೆ ಮರು ಆರಂಭವಾಗಲು ಸ್ಥಳೀಯ ಬಿಜೆಪಿ ಮುಖಂಡರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕಾರಣ ಎಂದು ಬಿಜೆಪಿಯ ಮೈಸೂರು ಜಿಲ್ಲಾ ಮಾಧ್ಯಮ ಪ್ರಮುಖ್ ಎಚ್.ಪಿ.ಗೋಪಾಲ್ ಹೇಳಿಕೆ ನೀಡಿದ್ದಾರೆ. ನಮ್ಮ ಶಾಸಕರ ಹೋರಾಟವನ್ನು ಮರೆತು ಮಾತನಾಡುವ ಮೂಲಕ ಅಗೌರವ ತೋರಿದ್ದು, ಕೂಡಲೇ ಮಹೇಶ್ ಅವರ ಬಳಿ ಕ್ಷಮೆ ಯಾಚಿಸಬೇಕೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಸಕ್ಕರೆ ಕಾರ್ಖಾನೆ ಆರಂಭವಾಗುವುದಿಲ್ಲ ಎಂದು ವಿರೋಧ ಪಕ್ಷದವರು ಚಾಲೆಂಜ್ ಮಾಡಿದ್ದರು. ಆದರೆ ಪಟ್ಟುಬಿಡದೆ ಶಾಸಕರು ರೈತರ ಜತೆ ಪಾದಯಾತ್ರೆ ಮಾಡುವುದರ ಜತೆಗೆ ಸದನದಲ್ಲಿ ಕಾರ್ಖಾನೆ ವಿಚಾರವನ್ನು ಮಂಡಿಸಿದರು. ಜತೆಗೆ ಕಾರ್ಮಿಕರಿಗೆ ಬರಬೇಕಿದ್ದ ಬಾಕಿ ಹಣವನ್ನೂ ಸರ್ಕಾರದಿಂದ ಕೊಡಿಸಿದರು ಎಂದು ತಿಳಿಸಿದರು.
ಜೆಡಿಎಸ್ ನಗರ ಕಾರ್ಯದರ್ಶಿ ರುದ್ರೇಶ್, ಶ್ರೀರಾಮ ಸಕ್ಕರೆ ಕಾರ್ಖಾನೆ ನೌಕರರ ಸಂಘದ ಮಾಜಿ ಅಧ್ಯಕ್ಷ ಉಮಾಶಂಕರ್, ಮುಖಂಡರಾದ ಹಾಡ್ಯ ಮಂಜುನಾಥ್, ಮೂಡಲಕೊಪ್ಪಲು ಹೇಮಂತ್ ಸುದ್ದಿಗೋಷ್ಠಿಯಲ್ಲಿದ್ದರು.